ಲೋಕಸಭೆ ಚುನಾವಣೆ ಮತದಾನ ಮುಕ್ತಾಯವಾಗಿದ್ದು, ಸದ್ಯ ಸಮೀಕ್ಷೆಗಳು ಹೊರ ಬರುತ್ತಿವೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ನಮಗೆ ಎಕ್ಸಿಟ್ ಪೋಲ್‌ಗಳ ಬಗ್ಗೆ ಯಾವುದೇ ನಂಬಿಕೆ ಇಲ್ಲ” ಎಂದಿದ್ದಾರೆ.
ಮಾಧ್ಯಮಗಳು ಸಂಪರ್ಕಿಸಿದಾಗ ಮಾಹಿತಿ ನೀಡಿದ ಅವರು, “ನಾನು ಮೊದಲೇ ಹೇಳೀದ್ದೇನೆ. ಯಾವುದೇ ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಡಬ್ಬಲ್ ಡಿಜಿಟ್ ಹೋಗುತ್ತದೆ” ಎಂದು ಹೇಳಿದ್ದಾರೆ.
“ಈ ಎಕ್ಸಿಟ್ ಪೋಲ್ ಬಗ್ಗೆ ವಿಶ್ವಾಸ ಇಲ್ಲ. ಬಹಳ ಡೆಪ್ತ್ ಆಗಿ ಹೋಗೋದಿಲ್ಲ. ಸ್ಯಾಂಪಲ್ ಅಷ್ಟೆ ಕಲೆಕ್ಟ್ ಮಾಡಿರುತ್ತಾರೆ. ಹೀಗಾಗಿ, ನಾನು ಹೆಚ್ಚು ಮಾತನಾಡುವುದಿಲ್ಲ” ಎಂದು ತಿಳಿಸಿದ್ದಾರೆ.
18ನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಕೊನೆಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ನಡೆಸಿದ ವಿವಿಧ ಸಂಸ್ಥೆಗಳ ವರದಿಗಳು ಬಹಿರಂಗಗೊಂಡಿವೆ.
ಟಿವಿ9 ಪೋಲ್‌ಸ್ಟ್ರಾಟ್ ಪೀಪಲ್ಸ್ ಇನ್‌ಸೈಟ್‌ನ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿ 18 ಸ್ಥಾನಗಳನ್ನು ಗಳಿಸಲಿದೆ ಎಂದಿದೆ. ಒಟ್ಟು 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಇದರಲ್ಲಿ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವ ಸಾಧ್ಯತೆ ಇದೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲುವ ಸಂಭವವಿದೆ ಎಂದು ಈ ಸಮೀಕ್ಷೆ ಹೇಳಿದೆ.
ನ್ಯೂಸ್ 18 ನಡೆಸಿದ ಎಕ್ಸಿಟ್ ಪೋಲ್‌ನಲ್ಲಿ ಕರ್ನಾಟಕದಲ್ಲಿ ಬಿಜೆಪಿ 21ರಿಂದ 24 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 3ರಿಂದ 7 ಸ್ಥಾನಗಳನ್ನು ಗೆಲ್ಲಲಿದೆ. ಇತರೆ ಯಾವ ಪಕ್ಷಗಳೂ ರಾಜ್ಯದಲ್ಲಿ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದೆ.
ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 23ರಿಂದ 25 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 3ರಿಂದ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದಿದೆ.
ಇಂಡಿಯಾ ಟಿ.ವಿ.: ಬಿಜೆಪಿ– 18ರಿಂದ 22; ಜೆಡಿಎಸ್– 1ರಿಂದ 3; ಕಾಂಗ್ರೆಸ್– 4ರಿಂದ 8
ಇಂಡಿಯಾ ಟುಡೇ: ಬಿಜೆಪಿ– 20ರಿಂದ 22; ಜೆಡಿಎಸ್– 2ರಿಂದ 3; ಕಾಂಗ್ರೆಸ್– 3ರಿಂದ 5
ಪೋಲ್ ಹಬ್: ಬಿಜೆಪಿ– 21ರಿಂದ 24; ಜೆಡಿಎಸ್– 1ರಿಂದ 2; ಕಾಂಗ್ರೆಸ್– 3ರಿಂದ 7
ಸಿ– ವೋಟರ್ಸ್: ಬಿಜೆಪಿ– 23; ಜೆಡಿಎಸ್– 2; ಕಾಂಗ್ರೆಸ್– 3ರಿಂದ 5