ನನ್ನ ಮಗ ರಾಕೇಶ್ ಸತ್ತು 8 ವರ್ಷಗಳಾಗಿವೆ. ಈಗ ಆ ವಿಚಾರವನ್ನು ಬೇರ್ಯಾವುದಕ್ಕೋ ಜೋಡಿಸಿ ಮಾತನಾಡುವುದು ಮೂರ್ಖತನ. ಕುಮಾರಸ್ವಾಮಿ ಅಣ್ಣನ ಮಗ ಅತ್ಯಾಚಾರ ಮಾಡಿ ಓಡಿ ಹೋಗಿದ್ದಾನೆ. ಅದಕ್ಕೂ 2016ರಲ್ಲಿ ಸತ್ತು ಹೋದ ನನ್ನ ಮಗನ ವಿಚಾರಕ್ಕೂ ಏನು ಸಂಬಂಧ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶದಿಂದ ಪ್ರಶ್ನಿಸಿದರು.
ರಾಕೇಶ್ ಸಿದ್ದರಾಮಯ್ಯ ಸಾವಿನ ವಿಚಾರ ಪ್ರಸ್ತಾಪಿಸಿ ಹೇಳಿಕೆ ನೀಡಿರುವ ಕುಮಾರಸ್ವಾಮಿಗೆ ಮೈಸೂರಿನಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, “ಅತ್ಯಾಚಾರಕ್ಕಿಂತ ಅದರ ವಿಡಿಯೊ ಹಂಚಿದ್ದು ದೊಡ್ಡ ಅಪರಾಧ ಎಂದು ಯಾವ ಕಾನೂನಿನಲ್ಲಿದೆ? ಕುಮಾರಸ್ವಾಮಿ ಯಾವ ಸೆಕ್ಷನ್ ಅಡಿ ಹೇಳಿಕೆ ನೀಡಿದ್ದಾರೆ? ಅದು ಭಾರತೀಯ ದಂಡ ಸಂಹಿತೆಯಲ್ಲಿ ಇದೆಯಾ ಅಥವಾ ಅವರೇ ಬರೆದುಕೊಂಡ ಕಾನೂನಿನಲ್ಲಿ ಇದೆಯಾ” ಎಂದು ಕುಟುಕಿದರು.
“ವಿಡಿಯೊ ಹಂಚಿದ್ದನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ವಿಡಿಯೊ ಹಂಚಿದ್ದು ಅತ್ಯಾಚಾರಕ್ಕಿಂತಲೂ ಮಹಾ ಅಪರಾಧ ಎಂದು ಹೇಳುವುದು ಸರಿಯಲ್ಲ. ಆ ರೀತಿ ಮಾತನಾಡುವುದು ದಿಕ್ಕು ತಪ್ಪಿಸುವ ನಡವಳಿಕೆ” ಎಂದರು.
‘ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ತಡವಾಗಿ ಪತ್ರ ಬಂತು’ ಎಂಬ ಬಿಜೆಪಿಯವರ ಸಮರ್ಥನೆಗೆ ಪ್ರತಿಕ್ರಿಯಿಸಿ, “ಇದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ. ನಾನು 15 ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಅದಕ್ಕೆ ಪ್ರತಿಕ್ರಿಯೆಯೇ ಬಂದಿಲ್ಲ. ನಾನು ಪತ್ರ ಬರೆದದ್ದು ತಡವೇ ಆಗಿದೆ ಎಂದುಕೊಳ್ಳೋಣ, ಬರೆದ ಮೇಲಾದರೂ ಕ್ರಮ ಕೈಗೊಂಡಿಲ್ಲವೇಕೆ? ಸುಮ್ಮನೆ ಕಾಲಹರಣ ಮಾಡುವುದನ್ನು ಬಿಡಬೇಕು” ಎಂದರು.
ಅಧಿಕಾರಿಗಳ ಅಮಾನತಿಗೆ ಸೂಚನೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಯುವಕನ ಸಾವು ಲಾಕಪ್ ಡೆತ್ ಅಲ್ಲ. ಮೃತ ಯುವಕನಿಗೆ ಮೂರ್ಛೆ ರೋಗ ಇತ್ತು. ಅದರಿಂದ ಆತ ಮೃತ ಪಟ್ಟಿದ್ದಾನೆ. ಆದರೆ, ಎಫ್ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದೇನೆ” ಎಂದು ಇದೇ ವೇಳೆ ಹೇಳಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಎಂಬ ವ್ಯಕ್ತಿಯನ್ನು ಒಸಿ (ಮಟ್ಕಾ) ಆಡಿಸುತ್ತಿದ್ದ ಆರೋಪದಲ್ಲಿ ಶುಕ್ರವಾರ ಪೊಲೀಸರು ಠಾಣೆಗೆ ಕರೆ ತಂದಿದ್ದರು. ಪೊಲೀಸರು ಠಾಣೆಗೆ ಕರೆ ತರುತ್ತಿದ್ದಂತೆ ಆರೋಪಿ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಇದರಿಂದ ಆಕ್ರೋಶಗೊಂಡ ಮೃತ ಕುಟುಂಬಸ್ಥರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು.