Homeಕರ್ನಾಟಕಬೆಂಗಳೂರಿಗೆ ಅಪಕೀರ್ತಿ ತರುವ ಬಿಜೆಪಿಗರ ಮಾತು ಸರಿಯಲ್ಲ: ಸಚಿವ ಪರಮೇಶ್ವರ್‌

ಬೆಂಗಳೂರಿಗೆ ಅಪಕೀರ್ತಿ ತರುವ ಬಿಜೆಪಿಗರ ಮಾತು ಸರಿಯಲ್ಲ: ಸಚಿವ ಪರಮೇಶ್ವರ್‌

ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಇಲಾಖೆಯು ಕಟ್ಟುನಿಟ್ಟಿನ‌ ಕ್ರಮ ತೆಗೆದುಕೊಂಡಿದ್ದು, ಬೆಂಗಳೂರಿಗೆ ಅಪಕೀರ್ತಿ ತರುವಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ‌ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಮಾದಕದ್ರವ್ಯ ಮುಕ್ತ ರಾಜ್ಯ ನಿರ್ಮಾಣದ ನಿಟ್ಟಿನಲ್ಲಿ ನಾನು ಮತ್ತು ಮುಖ್ಯಮಂತ್ರಿಯವರು ಘೋಷಿಸಿದ್ದೇವೆ.‌ ರಾಜ್ಯದಲ್ಲಿ ಸಾವಿರಾರು ಕೆಜಿ ಗಾಂಜಾ, ಎಂಡಿಎಂಎ, ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವಿದೇಶಿಗರನ್ನು ಗಡಿಪಾರು ಮಾಡಲಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ” ಎಂದರು‌.

“ಉಡ್ತಾ ಬೆಂಗಳೂರು ಅಂತ ಮಾತನಾಡುವುದು ಸರಿಯಲ್ಲ. ಇನ್ನೂ ಹೆಚ್ಚು ನಿಯಂತ್ರಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲಿ. ಆದರೆ, ಬೆಂಗಳೂರಿಗೆ ಅಪಕೀರ್ತಿ ತರುವಂತಹ ಮಾತನ್ನು ಆಡಬಾರದು. ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ” ಎಂದು ತಿಳಿಸಿದರು

“ಬಿಜೆಪಿಯವರ ಕಾಲದಲ್ಲಿ ಮರ್ಡರ್‌ಗಳಾಗಿರಲಿಲ್ಲವೇ? ಹಾಗಂತ ಮರ್ಡರ್‌ ಆಗಬೇಕು ಅಂತ ನಾವು ಆಪೇಕ್ಷೆ ಪಡುವುದಿಲ್ಲ. ಅರೋಪಿಗಳನ್ನು ಹಿಡಿದು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತ‌ ಕೆಲಸವನ್ನು ತಕ್ಷಣವೇ ಮಾಡಿದ್ದೇವೆ. ಶೇ 95ರಷ್ಟು ಕೊಲೆ ಪ್ರಕರಣಗಳ ಆರೋಪಿಗಳನ್ನು 24 ಗಂಟೆಗಳಲ್ಲಿಯೇ ಹಿಡಿದಿದ್ದೇವೆ. ಸುಮ್ಮನೇ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದು ಸರಿಯಲ್ಲ” ಎಂದರು.

“ಎಚ್ ಡಿ ದೇವೆಗೌಡರು ಪ್ರಜ್ವಲ್‌ಗೆ ಪತ್ರ ಬರೆದಿದ್ದಾರೆ ಎಂಬುದು ಗೊತ್ತಾಗಿದೆ. ಅದು ಅವರ ಕುಟುಂಬದ ಆಂತರಿಕ ವಿಚಾರ ಇರಬಹುದು.‌ ಪ್ರಜ್ವಲ್ ರೇವಣ್ಣ ಸಾರ್ವಜನಿಕ ದೃಷ್ಟಿಯಿಂದ ದೇವೇಗೌಡ ಅವರ ಪತ್ರಕ್ಕೆ ಗೌರವ ಕೊಟ್ಟು ದೇಶಕ್ಕೆ ವಾಪಸ್ ಆಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಸ್‌ಪೋರ್ಟ್ ರದ್ದು; ಪ್ರಕ್ರಿಯೆ ಆರಂಭ

“ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು ಬರೆದ ಪತ್ರಕ್ಕೆ ಕೇಂದ್ರ ಸರ್ಕಾರದಿಂದ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ. ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ ಎಂಬ ಮಾಹಿತಿ ಬಂದಿದೆ” ಎಂದರು.

ಫೋನ್ ಟ್ಯಾಪಿಂಗ್ ಆರೋಪದ ಕುರಿತು ಪ್ರತಿಕ್ರಿಯಿಸಿ, “ಸುಮ್ಮನೆ ಅವರು, ಇವರು ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಫೋನ್ ಟ್ಯಾಪಿಂಗ್ ಯಾರು ಮಾಡುತ್ತಿದ್ದಾರೆ? ಯಾರದ್ದು ಮಾಡಿದ್ದಾರೆ ಎಂಬುದು ಗೊತ್ತಿದ್ದರೆ ಹೇಳಲಿ. ಬಾಯಿಗೆ ಬಂದಿದ್ದು ಹೇಳಿದರೆ ಯಾರು ಕೇಳುತ್ತಾರೆ? ದೇಶದಲ್ಲಿ, ರಾಜ್ಯದಲ್ಲಿ ಕಾನೂನು ಇದೆ. ಕಾನೂನು ಹೊರತುಪಡಿಸಿ ನಾವ್ಯಾರು ಏನು ಮಾಡಲಾಗುವುದಿಲ್ಲ” ಎಂದು ಹೇಳಿದರು.

“ಸುತ್ತೋಲೆ ಹೊರಡಿಸುವ ಅಗತ್ಯತೆ ಏನಿದೆ. ಪ್ರತಿನಿತ್ಯ ಯಾರು ಸುತ್ತೋಲೆ ಹೊರಡಿಸಲಾಗುವುದಿಲ್ಲ. ಯಾರೋ ಹೇಳಿದ್ದನ್ನು ನೀವು ಕೇಳಬೇಡಿ. ಕಳ್ಳತನಕ್ಕೊಂದು, ಕೊಲೆಗೊಂದು, ಯಾರೋ ಟ್ರಾಫಿಕ್‌ ಅಫೆನ್ಸ್‌ ಮಾಡಿದ್ರು ಅಂತ ಸುತ್ತೋಲೆ ಹೊರಡಿಸಲು ಆಗುತ್ತಾ?. ಕಾನೂನಿನ ಪ್ರಕಾರ‌ ಕೆಲಸ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದೇವೆ. ಅವರು ತರಬೇತಿ ಪಡೆದಿದ್ದಾರೆ. ಅದರಂತೆ‌ ಕೆಲಸ‌ ಮಾಡದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments