ರಾಜ್ಯದಲ್ಲಿ ಪದೇ ಪದೆ ಬಿಜೆಪಿ ಮೇಲಿನ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಶಾಸಕರ ಬಂಧನದ ದುಸ್ಸಾಹಸಕ್ಕೆ ಪೊಲೀಸರು ಮುಂದಾದರೆ ಮುಂದೆ ನಡೆಯುವ ಘಟನೆಗೆ ರಾಜ್ಯ ಸರ್ಕಾರ, ಪೊಲೀಸ್ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ” ಎಂದು ತಿಳಿಸಿದರು.
“ದಕ್ಷಿಣ ಕನ್ನಡದಲ್ಲಿ ಕಾನೂನು- ಸುವ್ಯವಸ್ಥೆ ಸುಗಮವಾಗಿ ಹೋಗುತ್ತಿರುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸಲು ಅಸಾಧ್ಯ. ಪೊಲೀಸರು ಕಾನೂನು- ಸುವ್ಯವಸ್ಥೆ ಹದಗೆಡಲು ಕುಮ್ಮಕ್ಕು ನೀಡುತ್ತಿದ್ದಾರೆ. ಶಾಸಕರ ಮೇಲೆ ಕ್ರಮ ಸಲ್ಲದು; ವಿನಾಕಾರಣ ನಮ್ಮ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಅವರನ್ನು ಬಿಡುಗಡೆ ಮಾಡಿ” ಎಂದು ಆಗ್ರಹಿಸಿದರು.
“ಇತ್ತೀಚೆಗೆ ಅಕ್ರಮ ಕ್ವಾರಿ ವಿಚಾರವಾಗಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಈ ವಿಚಾರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧನ ಮಾಡಲು ಪೊಲೀಸರು ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಶಾಸಕರ ಬಂಧನ ಪ್ರಯತ್ನದಿಂದ ಉತ್ತಮ ಸಂದೇಶ ರಾಜ್ಯಕ್ಕೆ ಹೋಗುವುದಿಲ್ಲ” ಎಂದು ಹೇಳಿದರು.
“ದಕ್ಷಿಣ ಕನ್ನಡ ಮಾತ್ರವಲ್ಲದೆ ರಾಜ್ಯದಾದ್ಯಂತ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಗೃಹ ಸಚಿವರು ಪೊಲೀಸ್ ವರಿಷ್ಠರ ಜೊತೆ ಮಾತನಾಡಬೇಕು” ಎಂದು ಒತ್ತಾಯಿಸಿದರು.
“ಗುಲ್ಬರ್ಗದಲ್ಲಿ ನಮ್ಮ ಕಾರ್ಯಕರ್ತನ ಹತ್ಯೆ ಆಗಿದೆ. ಚುನಾವಣೆ ಸಂದರ್ಭದಲ್ಲಿ ಕೊಡಗಿನಲ್ಲಿ ನಮ್ಮ ಕಾರ್ಯಕರ್ತನ ಮೇಲೆ ಕಾರು ಹರಿಸಿ ಒಬ್ಬರು ಮರಣ ಹೊಂದಿದ್ದಾರೆ ಎಂದು ಗಮನ ಸೆಳೆದ ಅವರು, ರಾಜ್ಯ ಸರಕಾರ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರನ್ನು ಬಂಧಿಸಲು ಹಿಂದೆ ಮುಂದೆ ನೋಡುತ್ತದೆ” ಎಂದು ಟೀಕಿಸಿದರು.
“ನಾನು ಮೊನ್ನೆ ಹರೀಶ್ ಪೂಂಜ ಅವರ ಭಾಷಣದ ವಿಡಿಯೋ ಕೇಳಿದ್ದೇನೆ. ಈ ವಿಷಯದಲ್ಲಿ ಶಾಸಕರ ಜೊತೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ. ಪೊಲೀಸ್ ಅಧಿಕಾರಿಗಳು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಅಕ್ರಮ ಕ್ವಾರಿ ಮಾಡುವವರ ವಿರುದ್ಧ ಎಫ್‍ಐಆರ್, ಕ್ರಮದ ವಿಚಾರದಲ್ಲಿ ನಮ್ಮದು, ಶಾಸಕರದ್ದಾಗಲೀ ತಕರಾರಿಲ್ಲ. ಎಫ್‍ಐಆರ್‌ನಲ್ಲಿ ನಮ್ಮ ಪಕ್ಷದ ಯುವಮುಖಂಡ ಶಶಿರಾಜ್ ಅವರ ಹೆಸರನ್ನು ಸೇರಿಸುವ ಪಿತೂರಿಯನ್ನು ಪೊಲೀಸ್ ಅಧಿಕಾರಿಗಳು ಮಾಡಿದ್ದಾಗಿ” ಆಕ್ಷೇಪ ವ್ಯಕ್ತಪಡಿಸಿದರು.