Homeಕರ್ನಾಟಕಬೆಂಗಳೂರು ಸಿಟಿ ರೌಂಡ್ಸ್‌ | ಸಾರ್ವಜನಿಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು ಸಿಟಿ ರೌಂಡ್ಸ್‌ | ಸಾರ್ವಜನಿಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಿಎಂ ಸಿದ್ದರಾಮಯ್ಯ

ರಾಜಧಾನಿ ಬೆಂಗಳೂರಿನಲ್ಲಿ ನಾನಾ ಕಾಮಗಾರಿ ಮತ್ತು ಮಳೆಯಿಂದ ಸಮಸ್ಯೆಗಳಿಗೆ ಒಳಗಾಗುವ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾದರು.

ಬೆಂಗಳೂರು ಸಿಟಿ ರೌಂಡ್ಸ್‌ ವೇಳೆ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲೇ ಪರಿಹಾರ ಕೂಡ ಸೂಚಿಸಿದರು.

ಸ್ಥಳ-1: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ವಿಧಾನಸಭಾ ಕ್ಷೇತ್ರ: ವಿಜಯನಗರ

ಸಮಸ್ಯೆ ಏನು: ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದೆ.

ಮುಖ್ಯಮಂತ್ರಿಗಳ ಸೂಚನೆ: ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಪ್ರವಾಹ ನಿಯಂತ್ರಣ ಕಾಮಗಾರಿಗೆ 11.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಈ ರಾಜಕಾಲುವೆಗೆ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಸೂಚಿಸಿದರು. ಸಮಸ್ಯೆ ಬಗೆಹರಿಸಲು ಕೊಟ್ಟ ಕಾಲ ಮಿತಿ ಮಳೆಗಾಲದೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಎಚ್ಚರಿಕೆ: ಈ ವರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು. ಇಲ್ಲದೊದ್ದರೆ ಸಸ್ಪೆಂಡ್ ಆಗ್ತೀರ ಎಂದು ಚೀಫ್ ಎಂಜಿನಿಯರ್‌ಗೆ ಸಿಎಂ ಎಚ್ಚರಿಸಿದರು.

ಸ್ಥಳ-2 ನಾಯಂಡಹಳ್ಳಿ, ವಿಧಾನಸಭಾ ಕ್ಷೇತ್ರ: ವಿಜಯನಗರ

ಸಮಸ್ಯೆ: ರಾಜಕಾಲುವೆಯಲ್ಲಿ ಮಳೆಗಾಲ ಪ್ರವಾಹ ಉಂಟಾಗುತ್ತಿದೆ. ಫ್ಲೈಓವರ್‌ ನಿರ್ಮಿಸಿದ್ದರಿಂದ ರಾಜಕಾಲುವೆಯ ವಿಸ್ತಾರ ಕಡಿಮೆ ಆಗಿದೆ.

ಮುಖ್ಯಮಂತ್ರಿಗಳ ಸೂಚನೆ: ನೀರು ಸರಾಗವಾಗಿ ಹರಿದುಹೋಗಲು ಹೆಚ್ಚುವರಿ ಕಾಲುವೆ ಅಗತ್ಯವಿದೆ. ಏಳುಕೋಟಿ ವೆಚ್ಚದ ಕಾಮಗಾರಿ ಅನುಮೋದನೆಯಾಗಿದ್ದು, ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದನೆ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ವಿವರಿಸಿದರು. ಅದರಂತೆ ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದನೆ ನೀಡಿ, ಕೂಡಲೇ ಬಿಬಿಎಂಪಿಯು ಕಾಮಗಾರಿ ಕೈಗೆತ್ತಿಕೊಳ್ಳಲು ಅನುವು ಮಾಡುವಂತೆ ಎರಡೂ ಇಲಾಖೆಗಳಿಗೆ ಸೂಚನೆ ನೀಡಿದರು.

ಸ್ಥಳ- 3 ಬಿಟಿಎಂ ಮೆಟ್ರೋ ಸ್ಟೇಷನ್, ವಿಧಾನಸಭೆ ಕ್ಷೇತ್ರ: ಬಿಟಿಎಂ ಲೇಔಟ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಸಂಚಾರ, ಸ್ಥಳ ಪರಿಶೀಲನೆ ವೇಳೆಗೆ ಬಿಟಿಎಂ ಮೆಟ್ರೋಸ್ಟೇಷನ್‌ಗೆ ಭೇಟಿ ನೀಡಿ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್‌ ಡೆಕ್ಕರ್‌ – 2 tier ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದರು. ಮೂರು ಕಿ.ಮೀ. ಉದ್ದದ ಈ ವ್ಯವಸ್ಥೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ಸಂಚಾರ ದಟ್ಟಣೆ ನಿವಾರಣೆಗೆ ಈ ಡಬ್ಬಲ್ ಡೆಕರ್ ಮಾದರಿಯನ್ನು ನಗರದ ಇತರ ಭಾಗಗಳಲ್ಲಿಯೂ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸಂಚಾರ ದಟ್ಟಣೆಗೆ ಪರಿಹಾರ ರೂಪವಾಗಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದಲ್ಲದೆ, ಸುಗಮ ಸಂಚಾರಕ್ಕಾಗಿ, ಬಿಟಿಎಂ ನಿಂದ ಬನಶಂಕರಿ ಕಡೆಗೆ ಹೋಗುವಾಗ, ರಾಘವೇಂದ್ರಸ್ವಾಮಿ ಟೆಂಪಲ್‌ ಸರ್ಕಲ್‌, ಜಯನಗರ 5ನೇ ಬ್ಲಾಕ್‌ನಲ್ಲಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇಲ್ಲಿ ಅಂಡರ್‌ ಪಾಸ್‌ ನಿರ್ಮಿಸಲು ಸೂಚಿಸಿದರು.

ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ?

ಸಿಟಿ ರೌಂಡ್ಸ್ ವೇಳೆ ಸಿಎಂ‌ ಕಣ್ಣಿಗೆ ರಸ್ತೆ ಬದಿ ಇದ್ದ ಒಣ ಮರಗಳು ಕಣ್ಣಿಗೆ ಬಿದ್ದವು. ಈ ವೇಳೆ ಗರಂ ಆದ ಸಿಎಂ, ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ. ಅನಾಹುತ ಆಗ್ಲಿ ಅಂತನಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬನಶಂಕರಿ 2nd stage 100 ft. ರಸ್ತೆಯ ಒಣಗಿದ ಮರಗಳನ್ಮು ತೆರವುಗೊಳಿಸಬೇಕು. ನಗರದಾದ್ಯಂತ ಇರುವ ಒಣಮರ, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು, ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು, ಪದ್ಮನಾಭನಗರ ಫ್ಲೈಓವರ್ ಬಳಿ ಹಾನಿಯಾಗಿರುವ ಫುಟ್ ಪಾತ್ ಶೀರ್ಘವಾಗಿ ದುರಸ್ತಿಗೊಳಿಸಲು ಹಾಗೂ ಮೆಟ್ರೋ ಮತ್ತು ಫ್ಲೈ ಓವರ್ ಕಾಮಗಾರಿಯಿಂದಾಗಿ ಅಲ್ಲಲ್ಲಿ ಹಾಕಲಾಗಿದ್ದ ಡೆಬ್ರಿಸ್ ಗಳನ್ನು ಆಗಿಂದಾಗಲೇ ತೆರವುಗೊಳಿಸಲು ಸಿಎಂ ಸೂಚನೆ ನೀಡಿದರು.

ಸ್ಥಳ- 4: ಕೋಡಿ ಚಿಕ್ಕನಹಳ್ಳಿ, ವಿಧಾನಸಭಾ ಕ್ಷೇತ್ರ: ಬೊಮ್ಮನಹಳ್ಳಿ

ಸಮಸ್ಯೆ: ರಾಜಕಾಲುವೆಯಿಂದ ನೀರು ಹೊರಗೆ ಹರಿದು, ಮನೆಗಳಿಗೆ ನೀರು ನುಗ್ಗುವ ಸಮಸ್ಯೆ

ಮುಖ್ಯಮಂತ್ರಿ ಸೂಚನೆ: ಇಲ್ಲಿನ ಪ್ರವಾಹ ನಿಯಂತ್ರಣಕ್ಕೆ ಜಾಕ್‌ವೆಲ್‌ ಮೂಲಕ ರಾಜಕಾಲುವೆಯಿಂದ ಹೊರ ಬರುವ ನೀರನ್ನು ಪಂಪ್‌ ಮಾಡಿ ಮಡಿವಾಳ ಕೆರೆಗೆ ಹರಿಸಲು ಸೂಚನೆ ನೀಡಿದರು. 4.3 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸಲು ಸೂಚಿಸಿದರು.

ಸ್ಥಳ-5 ಸಿಲ್ಕ್‌ ಬೋರ್ಡ್‌, ಹೊಸೂರು ಮುಖ್ಯರಸ್ತೆ, ವಿಧಾನಸಭಾ ಕ್ಷೇತ್ರ: ಬೊಮ್ಮನಹಳ್ಳಿ

ಸಮಸ್ಯೆ: ಮಟ್ರೋ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ.

ಮುಖ್ಯಮಂತ್ರಿ ನೀಡಿದ ಸೂಚನೆ: ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು 4.5 ಕೋಟಿ ಕಾಮಗಾರಿ ಅಗತ್ಯವಿದೆ ಹಾಗೂ ಸರ್ಕಾರದ ಉನ್ನತಾಧಿಕಾರ ಸಮಿತಿಯ ಅನುಮತಿ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿವರಿಸಿದರು. ಪರ್ಯಾಯ ವ್ಯವಸ್ಥೆಯ ಕಾಮಗಾರಿ ಕೈಗೊಳ್ಳಲು ಸಮ್ಮತಿಸಿದ ಮುಖ್ಯಮಂತ್ರಿಗಳು ಮುಂದಿನ ಉನ್ನತಾಧಿಕಾರ ಸಮಿತಿ ಸಭೆಯ ಮುಂದೆ ಮಂಡಿಸಲು ಸೂಚಿಸಿದರು. ಜೊತೆಗೆ ಈ ಯೋಜನೆಯನ್ನು ಮುಂದಿನ 10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದರು. ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸ್ಥಳ-6 ಈಜಿಪುರ, ವಿಧಾನಸಭಾ ಕ್ಷೇತ್ರ: ಶಾಂತಿನಗರ

ಸಮಸ್ಯೆ: ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ. 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್‌ ಕಾಮಗಾರಿ.

ಮುಖ್ಯಮಂತ್ರಿ ನೀಡಿದ ಸೂಚನೆ: ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದನಂತರ ದಿನಾಂಕ 20-11-2023 ರಂದು BSCPL ಎಂಬ ಕಂಪೆನಿಗೆ ಕಾರ್ಯಾದೇಶ ನೀಡಲಾಗಿತ್ತು. ಟೆಂಡರ್‌ ಷರತ್ತಿನ ಪ್ರಕಾರ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಳೆದ ಆರು ತಿಂಗಳಲ್ಲಿ ಕೇವಲ ಶೇ. 4 ರಿಂದ 6 ರಷ್ಟು ಪ್ರಗತಿಯಾಗಿದೆ. ಈ ಮಾಹಿತಿ ತಿಳಿದ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್‌ ನೀಡಿ, ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್‌ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡುವಂತೆ ಸೂಚಿಸಿದರು.

ಅಗತ್ಯ ಹಣ ಕೊಟ್ಟಿದ್ದರೂ ಆರು ತಿಂಗಳಲ್ಲಿ ಕೇವಲ 4% ಕಾಮಗಾರಿ ಮಾಡಿದ್ದೀಯಲ್ಲಾ, ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಪ್ರಜ್ಞೆ ಬೇಡ್ವಾ, ನಿನ್ನ ಕೈಲಿ ಆಗದಿದ್ದರೆ ಜಾಗ ಖಾಲಿ ಮಾಡಿ ಎಂದು ಕಂಪನಿ ಪ್ರತಿನಿಧಿಗಳಿಗೆ ಸಿಎಂ ಸ್ಪಷ್ಟ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments