Homeಕರ್ನಾಟಕಪ್ರಜ್ವಲ್ ಪ್ರಕರಣ | ಟೀಕೆಗೆ ಅರ್ಥವಿಲ್ಲ, ಕಾನೂನಿನ ಚೌಕಟ್ಟಿನಲ್ಲಿ ಕೇಂದ್ರ ಸಹಾಯ ಮಾಡಲಿ: ಸಚಿವ ಪರಮೇಶ್ವರ್‌

ಪ್ರಜ್ವಲ್ ಪ್ರಕರಣ | ಟೀಕೆಗೆ ಅರ್ಥವಿಲ್ಲ, ಕಾನೂನಿನ ಚೌಕಟ್ಟಿನಲ್ಲಿ ಕೇಂದ್ರ ಸಹಾಯ ಮಾಡಲಿ: ಸಚಿವ ಪರಮೇಶ್ವರ್‌

ಸಂಸದ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಈವರೆಗೂ ಸ್ಪಂದಿಸಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. ಎಸ್ಐಟಿ ಪತ್ರ ಬರೆದಿದೆ. ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ‌” ಎಂದರು.

“ಕೇಂದ್ರ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಬೇಕು. ಬರೀ ಟೀಕೆ ಮಾಡಿದರೆ ಅರ್ಥವಿಲ್ಲ. ಪ್ರಜ್ವಲ್ ರೇವಣ್ಣ ಅವರ ಮೇಲೆ ವಾರಂಟ್ ಜಾರಿ ಮಾಡಿರುವುದನ್ನು ತಿಳಿಸಲಾಗಿದೆ. ವಾರಂಟ್ ಜಾರಿಯಾದ ನಂತರ ಪಾಸ್‌ಪೋರ್ಟ್ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ” ಎಂದು ಹೇಳಿದರು.

ಉಪಮುಖ್ಯಮಂತ್ರಿಯವರದ್ದು ಎನ್ನಲಾದ ಆಡಿಯೋ ಕುರಿತು ಹೆಚ್ ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಕುಮಾರಸ್ವಾಮಿ ಅವರು ಪ್ರತಿಯೊಂದಕ್ಕು ಮಾತನಾಡುತ್ತಿದ್ದಾರೆ. ಕಾನೂನಿಮ ಚೌಕಟ್ಟಿನಲ್ಲಿ ಎಸ್ಐಟಿ ಏನೆಲ್ಲ ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದೆ. ಕುಮಾರಸ್ವಾಮಿ ಅವರು ತನಿಖೆ ಹೀಗೆ ನಡೆಯಬೇಕು, ಹಾಗೇ ಮಾಡಬೇಕು ಅಂತ ಹೇಳಿದಹಾಗೇ ಕಾಣುತ್ತಿದೆ” ಎಂದು ಕುಟುಕಿದರು.

ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂಬುದನ್ನು ನಾನು ಮತ್ತು ಮುಖ್ಯಮಂತ್ರಿಯವರು ಅಂಕಿ-ಅಂಶವನ್ನು ಪ್ರಕಟಿಸಿದ್ದೇವೆ. ಯಾರ ಕಾಲದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿದ್ದವು ಎಂಬುದಕ್ಕೆ ಅಂಕಿ-ಅಂಶಗಳಿವೆ. ಅದಕ್ಕೆ ಬಿಜೆಪಿಯವರು ಮೊದಲು ಉತ್ತರ ನೀಡಲಿ” ಎಂದು ಸವಾಲು ಹಾಕಿದರು.

“ಖಾಸಗಿ ವಲಯದಲ್ಲಿ ಮೀಸಲಾತಿ‌ ನೀಡಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸಿದವರು ನಾವು. ಲಕ್ಷಾಂತರ ಹುದ್ದೆಗಳನ್ನು ಯಾರಿಗೂ ಗೊತ್ತಿಲ್ಲದೆ ನೇಮಕ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಹೊರಗುತ್ತಿಗೆ ಹುದ್ದೆಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ನೇಮಕ ಮಾಡಿಕೊಳ್ಳುವಾಗ ಮೆರಿಟ್‌ನಲ್ಲಿ ಹೊಂದಾಣಿಕೆಯಾಗುವುದು ಬೇಡ. ದಲಿತ ಸಮುದಾಯದ ಪದವೀದರರು ಮೆರಿಟ್‌ನಲ್ಲಿ ಬರುತ್ತಿದ್ದಾರೆ” ಎಂದರು.

“ಸ್ಥಳೀಯ ಸಂಸ್ಥೆಯ ಚುನಾವಣೆ ನೆನೆಗುದಿಗೆ ಬಿದ್ದಿವೆ. ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರಿತಿನಿಧಿಗಳು ಬೇಕು. ಕೋರ್ಟ್‌ನ ಆದೇಶ ಯಾವಾಗ ಬೇಕಾದರು ಬರಬಹುದು. ಇದನ್ನು ಗಮನದಲ್ಲಿಡ್ಡುಕೊಂಡು ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ” ಎಂದು ಹೇಳಿದರು.

ಪಕ್ಷದ ಅಧ್ಯಕ್ಷರ ಬದಲಾವಣೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ರೀತಿಯ ಚರ್ಚೆ ಆಗಿಲ್ಲ. ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಅಧ್ಯಕ್ಷರನ್ನು ಬದಲಾಯಿಸಬೇಕು ಅನ್ನಿಸಿದರೆ ಬದಲಾಯಿಸುತ್ತಾರೆ. ಇಲ್ಲವಾದರೆ ಇಲ್ಲ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments