Homeಕರ್ನಾಟಕಗ್ರೇಸ್‌ ಅಂಕ | ಮಕ್ಕಳಿಗಾದ ಅನ್ಯಾಯ ಸರಿಪಡಿಸಿ; ಸಿಎಂಗೆ ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ...

ಗ್ರೇಸ್‌ ಅಂಕ | ಮಕ್ಕಳಿಗಾದ ಅನ್ಯಾಯ ಸರಿಪಡಿಸಿ; ಸಿಎಂಗೆ ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ ಮನವಿ

ಗ್ರೇಸ್‌ ಅಂಕಗಳ ಮೂಲಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವ ಶಿಕ್ಷಣ ಇಲಾಖೆಯ ಹೆಗ್ಗಳಿಕೆ ರಾಜ್ಯದಲ್ಲಿ ಕಲಿಕಾ ಬಿಕ್ಕಟ್ಟಿನ ಉದ್ದ, ಆಳ ಹಾಗೂ ಅಗಲವನ್ನು ಪ್ರತಿಬಿಂಬಿಸುತ್ತದೆ ಎಂದು ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, “ಕಳೆದ 40 ವರ್ಷಗಳಿಂದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ನನಗೆ ಶಾಲಾ ಶಿಕ್ಷಣದ ಗುಣಮಟ್ಟದ ಬಗ್ಗೆ ತೀವ್ರ ಆತಂಕವಿದೆ. ಅನೇಕ ಬಾರಿ ಸಮಯ ಸಿಕ್ಕಾಗ ಸಭೆಗಳಲ್ಲಿ ತಮ್ಮ ಬಳಿ ಹೇಳಿಕೊಂಡಿದ್ದೇನೆ . ಆದರೆ , ಇತ್ತೀಚೆಗೆ ಪ್ರಕಟವಾದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯ ಫಲಿತಾಂಶದ ಸಂದರ್ಭದಲ್ಲಿ ಗ್ರೇಸ್‌ ಅಂಕಗಳ ಮೂಲಕ ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಸುಧಾರಿಸಿದ ಬಗ್ಗೆ ಅಧಿಕಾರಿಗಳು ಸಾಧನೆ ಎಂಬ ರೀತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇದು ರಾಜ್ಯದಲ್ಲಿ ಕಲಿಕಾ ಬಿಕ್ಕಟ್ಟಿನ ಉದ್ದ ಆಳ ಅಗಲವನ್ನು ಪ್ರತಿಬಿಂಬಿಸುತ್ತದೆ” ಎಂದು ತಿಳಿಸಿದ್ದಾರೆ.

“ನಾವು ತೋಷಪಡುವುದಕ್ಕಿಂತ ನಾಚಿಕೆಯಿಂದ ತಲೆ ತಗ್ಗಿಸುವ ವಿಷಯ . ಕಾರಣವಿಷ್ಟೆ, ಒಂದು ಶೈಕ್ಷಣಿಕ ವರ್ಷದಲ್ಲಿ ಪ್ರೌಢ ಶಾಲೆಯಲ್ಲಿ ಸುಮಾರು 244 ಕಲಿಕಾ ದಿನಗಳು ಮತ್ತು 1100 ಕಲಿಕಾ ಅವಧಿಗಳನ್ನು ಹೊಂದಿರುತ್ತೇವೆ. ಈ ಧೀರ್ಘಕಾಲದ ಅವಧಿಯಲ್ಲಿ ನಾವು ಮಕ್ಕಳಿಗೆ ಕನಿಷ್ಠ ಅಂಕಗಳನ್ನು ಗಳಿಸಿ ಉತ್ತೀರ್ಣರನ್ನಾಗಿಸಲು ಸಾಂಸ್ಥಿಕವಾಗಿ ವ್ಯವಸ್ಥೆಯನ್ನು ಗಟ್ಟಿ ಮಾಡದೆ ಗ್ರೇಸ್‌ ಅಂಕಗಳಿಗೆ ಮೊರೆ ಹೋಗಿರುವುದು ನಮ್ಮ ಕಲಿಕಾ ಮತ್ತು ಮೇಲುಸ್ತುವಾರಿ ವ್ಯವಸ್ಥೆಯ ಹೀನಾಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.

“2023-24 ನಾಲ್ಕನೇ ಸಾಲಿನಲ್ಲಿ ರಾಜ್ಯದಾದ್ಯಂತ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ಬರೆದಿದ್ದಾರೆ. ಮಂಡಲಿಯ ಈ ಬಾರಿಯ ಪರೀಕ್ಷಾ ವ್ಯವಸ್ಥೆಯಲ್ಲಿ ವೆಬ್‌ ಕಾಸ್ಟಿಂಗ್‌ (webcasting) ಕಠಿಣ ಮೇಲುಸ್ತುವಾರಿ ಇತ್ಯಾದಿ ಕ್ರಮಗಳ ಮೂಲಕ ನಡೆಯಬಹುದಾಗಿದೆ ಎಂಬ ಅಕ್ರಮಕ್ಕೆ ಕಡಿವಾಣವಾಗಿದೆ. ಒಂದು ರೀತಿಯಲ್ಲಿ ಈ ವೆಬ್‌ ಕಾಸ್ಟಿಂಗ್‌ ಎಂಬುದು ಮಕ್ಕಳನ್ನು ಅವಮಾನಿಸಿದಂತಿದೆ . ಎಲ್ಲಾ ಮಕ್ಕಳಿಗೆ ನಾವು ಪ್ರಭುತ್ವದ ಮಟ್ಟಕ್ಕೆ ಕಲಿಸಲು ಸಾಧ್ಯವಾದರೆ, ಈ ಬಗೆಯ ಸರ್ಕಸ್‌ ಗಳ ಅವಶ್ಯಕತೆ ಇರುವುದಿಲ್ಲ” ಎಂದು ಹೇಳಿದ್ದಾರೆ.

“ಈ ಬಾರಿಯ ಶೇಕಡ ಫಲಿತಾಂಶ 54% ಕ್ಕಿಂತ ಕಡಿಮೆ ದಾಖಲಿಸಿದ ಕಾರಣ , ಪರೀಕ್ಷಾ ಮಂಡಳಿಯು ಗ್ರೇಸ್ ಅಂಕಗಳನ್ನು ನೀಡಿ ಫಲಿತಾಂಶವನ್ನು ಏರಿಸಿದೆ. ಮೊದಲನೆಯದಾಗಿ ಈ ಗ್ರೇಸ್ ಏಕೆ? ಈ ನಿರ್ದೇಶನ ನೀಡಿದವರು ಯಾರು? ತಮ್ಮ ಗಮನಕ್ಕೆ ಬಂದಿತ್ತೆ? ಒಂದು ಕ್ಷಣ ಗ್ರೇಸ್ ಒಪ್ಪುವುದಾದರು , ಅದರಲ್ಲಿ ತಾರತಮ್ಯ ಏಕೆ? ಈ ನಿಯಮದ ಬಗ್ಗೆ ಸಮಾಜಕ್ಕೆ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇಲಾಖೆ ತಿಳಿಸಿತ್ತೆ? ಇದು ನ್ಯಾಯ ಸಮ್ಮತವೇ” ಎಂದು ಪ್ರಶ್ನಿಸಿದ್ದಾರೆ.

“ಗ್ರೇಸ್ ನೀಡುವ ವಿಧಾನವು ಕೂಡ ಎಷ್ಟು ಅವೈಜ್ಞಾನಿಕವಾಗಿದೆ ಎಂದರೆ , ಒಂದು ಉದಾಹರಣೆ ಮೂಲಕ ನೋಡೋಣ. ಉದಾಹರಣೆಗೆ 80 ಅಂಕಗಳಿಗೆ ಲಿಖಿತ ಪರೀಕ್ಷೆ ಬರೆದ ವಿದ್ಯಾರ್ಥಿ ಗಣಿತದಲ್ಲಿ ಕೇವಲ 9 ಅಂಕಗಳಿಸಿರುತ್ತಾರೆ . ಅದರ ಜೊತೆಗೆ ಆಂತರಿಕ ಶಾಲಾ ಅಂಕ 23 ಸೇರಿ ಒಟ್ಟು 32 ಅಂಕಗಳಾಯಿತು . ಇದಕ್ಕೆ ಮಂಡಳಿ 12 ಅಂಕಗಳನ್ನು ಸೇರಿಸಿ ವಿದ್ಯಾರ್ಥಿಯ ಗಣಿತ ವಿಷಯವನ್ನು ತೇರ್ಗಡೆ ಎಂದು ಘೋಷಿಸಿದೆ .ಆದರೆ ಪ್ರಥಮ ಭಾಷೆಯಲ್ಲಿ ನೂರಕ್ಕೆ 26 ಅಂಕಗಳಿಸಿದ ವಿದ್ಯಾರ್ಥಿಗೆ ಆಂತರಿಕ ಅಂಕಗಳು ಸೇರಿ ಒಟ್ಟು 42 ಅಂಕ ಗಳಿಸಿದ್ದರು ವಿದ್ಯಾರ್ಥಿ ಫೇಲ್ ಆಗಿದ್ದಾರೆ. ಅಂದರೆ ಕೋರ್ ವಿಷಯಗಳಿಗೆ ನೀಡಿದ ಗ್ರೇಸ್ ಅಂಕಗಳು ವಿದ್ಯಾರ್ಥಿಯನ್ನು ತೇರ್ಗಡೆ ಮಾಡಲು ಪೂರಕವಾಗಿದ್ದರೆ , ಭಾಷಾ ವಿಷಯದಲ್ಲಿ ಈ ನಿಯಮ ಸಹಕಾರಿಯಾಗಲಿಲ್ಲ. ಒಟ್ಟಾರೆ, ಒಂದೇ ಶಾಲೆಯಲ್ಲಿ ಗ್ರೇಸ್ ನೀಡುವಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ” ಎಂದು ವಿವರಿಸಿದ್ದಾರೆ.

“ರಾಜ್ಯದಾದ್ಯಂತ ಈ ಗ್ರೇಸ್ ನೀಡಿ ಪ್ರಕಟಿಸಿರುವ ಫಲಿತಾಂಶ ಪ್ರಶ್ನಾರ್ಹವಾಗಿದೆ ಮತ್ತು ತಾರತಮ್ಯದಿಂದ ಕೂಡಿದೆ. ಗಡಿನಾಡು ಅನ್ಯ ಭಾಷಾ ವಿದ್ಯಾರ್ಥಿಗಳು ಮತ್ತು ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ. ಹೀಗಾಗಿ, ಈ ಗ್ರೇಸ್ ನೀಡುವ ಪದ್ಧತಿಯು ಅತ್ಯಂತ ಹಾಸ್ಯಾಸ್ಪವಾಗಿದೆ” ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

“ನಮ್ಮದೇ ರಾಜ್ಯದಲ್ಲಿ ಸಿಬಿಎಸ್ಇ ಹಾಗು ಐಸಿಎಸ್ಇ ಫಲಿತಾಂಶವನ್ನು ಅವಲೋಕನ ಮಾಡಿದರೆ ಅದು ಪ್ರತಿ ವರ್ಷ 95%ಕ್ಕೂ ಮಿಗಿಲು. ಕಾರಣ ಫಲಿತಾಂಶ ನೀಡುತ್ತಿರುವ ನಿಯಮ ವಿದ್ಯಾರ್ಥಿ ಸ್ನೇಹಯಾಗಿದೆ . ಆದರೆ ರಾಜ್ಯ ಪಠ್ಯಕ್ರಮದ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಮಾಡುತ್ತಿದೆ. ಇಷ್ಟಕ್ಕೂ ಶೈಕ್ಷಣಿಕ ಗುಣಮಟ್ಟವು ಕೇವಲ ಮೌಲ್ಯಮಾಪನದಿಂದ ಕಂಡುಕೊಳ್ಳುವುದಲ್ಲ. ಶಾಲಾ ಶೈಕ್ಷಣಿಕ ಮೂಲಸೌಕರ್ಯದ ನಿಟ್ಟಿನಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ . ಎಷ್ಟೋ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ . ಖಾಯಂ ಶಿಕ್ಷಕರಿರಬೇಕಾದ ಜಾಗದಲ್ಲಿ ಸುಮಾರು 35 ಸಾವಿರ ಅತಿಥಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಣವು ದಿನದಿಂದ ದಿನಕ್ಕೆ ಸೊರಗುತ್ತಿದೆ. ಹೀಗಿರುವಾಗ, ಮಂಡಳಿಯ ಪರೀಕ್ಷಾ ಮೌಲ್ಯಮಾಪನ ಪದ್ಧತಿ ,ತೇರ್ಗಡೆಯ ನಿಯಮಗಳು ಮತ್ತು ಈ ಗ್ರೇಸ್ ನೀಡುವಂತಹ ವಿಧಾನವು ಅನ್ಯಾಯದ ಪರಮಾವಧಿಯಾಗಿದೆ” ಎಂದು ವಿಶ್ಲೇಷಿಸಿದ್ದಾರೆ.

“ಮೂಲ ಸೌಕರ್ಯ ಮತ್ತು ಶಿಕ್ಷಕರೇ ಇಲ್ಲದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳು ಮತ್ತು ಎಲ್ಲಾ ಸೌಕರ್ಯ ಇರುವ ನಗರದ ಶಾಲಾ ವಿದ್ಯಾರ್ಥಿಗಳನ್ನು ಒಂದೇ ಬಗೆಯ ಪರೀಕ್ಷೆಯ ಮೌಲ್ಯಮಾಪನ ಪದ್ದತಿಗೆ ಒಳಪಡಿಸಿ ಫಲಿತಾಂಶ ನೀಡುವುದು ಯಾವ ನ್ಯಾಯ ಎಂಬುದನ್ನು ಪರಾಮರ್ಶಿಸಬೇಕಿದೆ. ಒಟ್ಟಾರೆ , ಶೈಕ್ಷಣಿಕ ಅಸಮಾನತೆ, ಅವಕಾಶಗಳ ಕೊರತೆ ಮತ್ತು ತಾರತಮ್ಯತೆ ಎದ್ದು ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಪರೀಕ್ಷಾ ಮೌಲ್ಯಮಾಪನದ ಏಕರೂಪತೆ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚಿಸಬೇಕಿದೆ . ಕನಿಷ್ಠ ಅವಕಾಶ ಮತ್ತು ಸೌಲಭ್ಯಗಳಲ್ಲಿಯಾದರು ಮೊದಲು ಸಮಾನತೆ ಕಲ್ಪಿಸಬೇಕಿದೆ” ಎಂದು ಒತ್ತಾಯಿಸಿದ್ದಾರೆ.

“ಗ್ರೇಸ್ ಪರೀಕ್ಷಾ ಪದ್ಧತಿಯಿಂದ , ಪ್ರತಿವರ್ಷ ಮೂರರಿಂದ ನಾಲ್ಕು ಲಕ್ಷ ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಯಿಂದ ಹೊರಗಿಟ್ಟಂತಾಗಿದೆ . ಅವರು ಮರಳಿ ಶಿಕ್ಷಣ ವ್ಯವಸ್ಥೆಗೆ ಬಂದಿದ್ದಾರೆ ಎಂಬ ಯಾವ ಪುರಾವೆಯೂ ಶಿಕ್ಷಣ ಇಲಾಖೆಯಲ್ಲಿ . ಹೀಗಿರುವಾಗ ಸಮಾಜದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೂಲಿಕಾರರಾಗಿಯೋ ಅಥವಾ ಅತ್ಯಲ್ಪ ಆರ್ಥಿಕ ಆದಾಯದಿಂದ ಈ ವ್ಯವಸ್ಥೆಯೊಳಗೆ ಭಾಗಿಗಳಾಗಿ ಜೀವನ ನಡೆಸುವಂತಾಗಿದೆ. ಇದಕ್ಕೆ ಪರೀಕ್ಷಾ ಪದ್ಧತಿಯೇ ಪರೋಕ್ಷ ಕಾರಣವಾಗಿದೆ. ಪರೀಕ್ಷೆ ಕಟ್ಟುನಿಟ್ಟಾಗಿ , ಪಾರದರ್ಶಕವಾಗಿ ಮತ್ತು ಪಾವಿತ್ರತೆಯಿಂದ ನಡೆಯಬೇಕೆಂದು ಬಯಸುವ ನಾವು ಪರೀಕ್ಷಾ ಪದ್ದತಿಯಷ್ಟೇ ಕಲಿಕಾ ವ್ಯವಸ್ಥೆಯು ಸುಧಾರಣೆ ಆಗಬೇಕೆಂದು ಯೋಚಿಸದಿರುವುದೇ ಈ ಎಲ್ಲಾ ದುರಂತಗಳಿಗೆ ಕಾರಣ”‌ ಎಂದಿದ್ದಾರೆ.

“ಕಲಿಕಾ ವ್ಯವಸ್ಥೆ ಸುಧಾರಣೆ ಆಗದ ಹೊರತು ಮಂಡಳಿಯ ಈ ಕ್ರಮ ಅನ್ಯಾಯವನ್ನು ಸಕ್ರಮಗೊಳಿಸಿದಂತಾಗುತ್ತದೆ . ಆದ್ದರಿಂದ ಮಂಡಳಿಯು ಗ್ರೇಸ್ ನೀಡುವುದು ಸಂವಿಧಾನ ಬಾಹಿರವಾಗಿದೆ ಮತ್ತು ಸಹಭಾಗಿತ್ವದ ಹೊಣೆಗಾರಿಕೆಯಿಲ್ಲದೆ ಪೋಷಕರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾರಕವಾದ ತೀರ್ಮಾನವನ್ನು ಮಂಡಳಿಯ ಅಧಿಕಾರಿಗಳು ಏಕ ಪಕ್ಷಿಯವಾಗಿ ಕೈಗೊಂಡಿರುವುದು ಅಕ್ಷಮ್ಯ ಅಪರಾಧ” ಎಂದು ತಿಳಿಸಿದ್ದಾರೆ.

“ಸಾಮಾಜಿಕ ನ್ಯಾಯ ಹಾಗು ಸಮಾನತೆಯ ಹರಿಕಾರರಾದ ತಾವು ಈ ಬಗ್ಗೆ ಕೂಲಂಕುಷವಾಗಿ ಪರೀಶೀಲಿಸಿ , ಈಗ ಮಕ್ಕಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಮುಂದಿನ ದಾರಿ ಏನಾಗಬೇಕೆಂಬುದನ್ನು ಸಮಾಲೋಚಿಸಿ ತೀರ್ಮಾನಿಸಬೇಕು” ಎಂದು ನಿರಂಜನಾರಾಧ್ಯ ಅವರು ಮುಖ್ಯಮಂತ್ರಿಗಳಿಗೆ ವಿನಂತಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments