Homeಕರ್ನಾಟಕಹುಬ್ಬಳ್ಳಿ ಬಾಲಕಿ ಕೊಲೆ | ಪೊಲೀಸರಿಂದ ಲೋಪ, ಇನ್‌ಸ್ಪೆಕ್ಟರ್ ಅಮಾನತು: ಸಚಿವ ಪರಮೇಶ್ವರ್‌

ಹುಬ್ಬಳ್ಳಿ ಬಾಲಕಿ ಕೊಲೆ | ಪೊಲೀಸರಿಂದ ಲೋಪ, ಇನ್‌ಸ್ಪೆಕ್ಟರ್ ಅಮಾನತು: ಸಚಿವ ಪರಮೇಶ್ವರ್‌

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪದೇ ಪದೆ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪದೇ ಪದೆ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ ಏನು? ಯಾವ ಫ್ಯಾಕ್ಟರ್ ಎಂಬುದನ್ನು ಗುರುತಿಸಿ ವರದಿ ಸಲ್ಲಿಸಲಿದ್ದಾರೆ. ಬಳಿಕ ಸಾಧ್ಯವಾದರೆ ನಾನು ಹೋಗಿ ಬರುತ್ತೇನೆ” ಎಂದರು.

“ಯುವತಿ ಅಂಜಲಿ ಕೊಲೆ‌ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಏನು ಕಠಿಣ ಶಿಕ್ಷೆ ಆಗಬೇಕು, ಅದನ್ನು ಮಾಡುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ಪೊಲೀಸರ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಅಮಾನತು ಮಾಡಲಾಗಿದೆ. ಮುಂದೆ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನು ಮಾಡುತ್ತೇವೆ‌” ಎಂದು ತಿಳಿಸಿದರು.

ಬೆದರಿಕೆ ಬಗ್ಗೆ ದೂರು ಕೊಟ್ಟಿದ್ದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಪೋಷಕರು ರಿಟರ್ನ್ ಕಂಪ್ಲೇಂಟ್ ಕೊಟ್ಟಿಲ್ಲ. ಈ ಬಗ್ಗೆ ತಿಳಿಸಿದ್ದರು ಎಂಬುದು ನನಗೆ ಬಂದಿರೋ ವರ್ತಮಾನ. ಅದಕ್ಕಾಗಿ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ಪೋಷಕರು ನಿಜವಾಗಿಯೂ ಹೇಳಿದ್ದರೆ? ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಯುತ್ತದೆ. ಇದರಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದರೆ ಮುಂದಿನ ಕ್ರಮ ಜರುಗಿಸಲಾಗುವುದು” ಎಂದರು

ಎಸ್ಐಟಿ ರಿಪೋರ್ಟ್ ಮಂಡ್ಯ ಶಾಸಕರಿಗೆ ಹೋಗುತ್ತಿದೆ.‌ ಗೃಹ ಸಚಿವರಿಗೆ ಹೋಗುತ್ತಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಇಂತಹ ವಿಚಾರಗಳನ್ನು ಸಾರ್ವಜನಿಕ ವಲಯಕ್ಕೆ ತರುವುದು ಸರಿಯಲ್ಲ ಎಂಬುದು ಕುಮಾರಸ್ವಾಮಿಯವರಿಗೂ ಚೆನ್ನಾಗಿ ಗೊತ್ತಿದೆ. ತನಿಖೆ ನಡೆಯುತ್ತಿದೆ. ಮಂಡ್ಯ ಶಾಸಕರಿಗೆ ಯಾರು ಬ್ರೀಫಿಂಗ್ ಮಾಡುತ್ತಾರೆ? ಸುಮ್ಮನೆ ಇದೆಲ್ಲ ಹೇಳೋದು ಸುಲಭ. ನಮಗೆಲ್ಲ ತುಂಬ ಜವಾಬ್ದಾರಿ ಇದೆ. ಜವಾಬ್ದಾರಿಯಿಂದ ಕೆಲಸ ಮಾಡುತ್ತೇವೆ. ಯಾವ ಮುಲಾಜಿಗೂ ಕೂಡ ಒಳಪಡುವುದಿಲ್ಲ. ಇದನ್ನು ಕುಮಾರಸ್ವಾಮಿಯವರಿಗೂ ಸಹ ಹೇಳಲು ಬಯಸುತ್ತೇನೆ. ಎಸ್ಐಟಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ನನಗಾಗಲಿ ಅಥವಾ ಮುಖ್ಯಮಂತ್ರಿಯವರಿಗಾಗಲಿ ಯಾವುದನ್ನು ಬ್ರೀಫಿಂಗ್ ಮಾಡಬೇಕೋ ಅದನ್ನು ಎಸ್ಐಟಿ ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು.

“ಸಂಸದ ಪ್ರಜ್ವಲ್‌ ರೇವಣ್ಣನನ್ನು ವಿದೇಶದಿಂದ ಕರೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಅವರನ್ನು ಕರೆತಂದು, ಏನೆಲ್ಲ ಕಾನೂನು ಕ್ರಮ ಕೈಗೊಳ್ಳಬೇಕೋ ಅಲ್ಲಿಯವರೆಗೂ ನಡೆಯುತ್ತಿರುತ್ತದೆ” ಎಂದರು.

ಪ್ರಜ್ವಲ್ ರೇವಣ್ಣ ಅವರಿಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿ, “ಬಿಜೆಪಿಯವರು ಹೇಳುತ್ತಾರೆ, ಜನತಾದಳದವರು ಹೇಳುತ್ತಾರೆ. ಸರ್ಕಾರಕ್ಕೆ ಜವಾಬ್ದಾರಿ ಇದೆಯಲ್ಲವೇ? ಇಂತಹ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಲು ಆಗುತ್ತದೆಯೇ? ವಿಪಕ್ಷದಲ್ಲಿರುವ ಅವರು ಅದನ್ನೇ ಹೇಳಬೇಕು. ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಎಂದು ಹೇಳಲು ಅವರಿಗೆ ಸಾಧ್ಯವಿಲ್ಲ. ಅದು ನನಗು ಅರಿವಿದೆ. ನಾವು ಮಾಡಬೇಕಾದ ಕೆಲಸವನ್ನು ಮಾಡುತ್ತೇವೆ” ಎಂದು ಹೇಳಿದರು.

ಗೃಹ ಸಚಿವ ಆಪ್ತನೆಂದು ವಂಚನೆ ಕುರಿತು

“ಕೊರಟಗೆರೆ ಕ್ಷೇತ್ರದ ವ್ಯಕ್ತಿ ಎಲ್ಲಿಯೋ ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದ. ಇತ್ತೀಚೆಗೆ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಒಳ್ಳೆಯದಕ್ಕೆ ಬಳಸಿದ್ದರೆ ಸರಿ. ಅದನ್ನು ದುರುಪಯೋಗಪಡಿಸಿಕೊಂಡಿರುವುದು ತಪ್ಪು. ಜನರಿಂದ ಹಣ ಪಡೆದುಕೊಂಡು ವಂಚಿಸಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾನೂನು‌ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಸಿಎಂ ಜೊತೆ ಸಭೆ

“ಮುಖ್ಯಮಂತ್ರಿಯವರು ಕರೆದಿರುವ ಸಭೆಯ ಅಜೆಂಡಾ ಏನೆಂಬುದು ಗೊತ್ತಾಗಿಲ್ಲ‌. ರಾಜ್ಯದಲ್ಲಿ ಮಳೆ ಪ್ರಾರಂಭವಾಗಿದೆ. ಆದರೂ ಬರದ ಪರಿಣಾಮ ಇನ್ನು ಕಡಿಮೆಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಸಭೆಯಲ್ಲಿ ಚರ್ಚಿಸಬಹುದು. ನಾನು ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments