ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಅವಕಾಶ ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಮಾನ್ಯ ಮಾಡಿದ್ದು, ಮತ ಚಲಾಯಿಸಲು ಅವಕಾಶಮಾಡಿಕೊಟ್ಟಿದೆ.
ಮತದಾನಕ್ಕೆ ಅವಕಾಶ ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಈಗ ಹೈಕೋರ್ಟ್ ವಿನಯ್ ಕುಲಕರ್ಣಿ ಅವರ ಮನವಿ ಪುರಸ್ಕರಿಸಿ ಮತ ಚಲಾಯಿಸಲು ಅವಕಾಶ ನೀಡಿದೆ.
ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಹೋಗಿ ಮತ ಚಲಾಯಿಸಿ ಕೂಡಲೇ ಅಲ್ಲಿಂದ ತೆರಳಬೇಕು ಎಂದು ಹೈಕೋರ್ಟ್ ವಿನಯ್ ಕುಲಕರ್ಣಿ ಅವರಿಗೆ ಸೂಚಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಯೋಗೀಶ್ ಗೌಡ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ತನಿಖೆಯಲ್ಲಿ ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯವರ ಕೈವಾಡ ಇರುವುದು ತಿಳಿದುಬಂದಿತ್ತು. ಅದರಿಂದ, ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿಯವರನ್ನು ಬಂಧಿಸಿದ್ದರು. ಅವರು ಪ್ರಭಾವಿ ಮುಖಂಡರಾಗಿರುವುದರಿಂದ ಅವರಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನ್ಯಾಯಾಲಯ ನಿರ್ಬಂಧ ಹೇರಿತ್ತು.