ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಕ್ರಿಮಿನಲ್ ಪ್ರಕರಣದಲ್ಲಿ; ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್ಐಆರ್‌ಗೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಎಸ್‌ಐಟಿ ತಂಡ ಎಚ್ ಡಿ ರೇವಣ್ಣ ಅವರನ್ನು ಶನಿವಾರ ಸಂಜೆ ವಶಕ್ಕೆ ಪಡೆದಿದೆ.
ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರವರ ನಿವಾಸದಲ್ಲಿ ರೇವಣ್ಣ ಇರುವ ಬಗ್ಗೆ ಮಾಹಿತಿ ಆಧರಿಸಿ ಎಸ್‌ಐಟಿ ಅಧಿಕಾರಿಗಳು ತೆರಳಿ, ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳು 20 ನಿಮಿಷಗಳ ಕಾಲ ದೇವೇಗೌಡರ ನಿವಾಸದ ಮುಂದೆ ಕಾದುನಿಂತಿದ್ದರು. ಬಳಿಕ ಬಾಗಲು ತೆಗೆದು ರೇವಣ್ಣ ಹೊರಬಂದರು.
ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿ, 24 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗಲು ಗಡುವು ನೀಡಿತ್ತು. ವಿಚಾರಣೆಗೆ ಬರದೇ ರೇವಣ್ಣ ಸತಾಯಿಸಿದ್ದರು. ನಂತರ ಎಸ್‌ಐಟಿ ಲುಕ್ ಔಟ್ ನೋಟಿಸ್ ನೀಡಿತ್ತು. ಈಗ ಕಾನೂನು ನಿಯಮ ಪ್ರಕಾರ ಎಸ್‌ಐಟಿ ರೇವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದೆ.