Homeಕರ್ನಾಟಕಶ್ರೀನಿವಾಸಪ್ರಸಾದ್ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಶ್ರೀನಿವಾಸಪ್ರಸಾದ್ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡುಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಂತಾಪ ಸೂಚಿಸಿ ಎಕ್ಸ್‌ ತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, “ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ” ಎಂದಿದ್ದಾರೆ.

“ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದ ಶ್ರೀನಿವಾಸ ಪ್ರಸಾದ್ ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ” ಎಂದು ಬಣ್ಣಿಸಿದ್ದಾರೆ.

“ಹಳೆಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆ ಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಗೆಲುವಾಗಿದ್ದ ಪ್ರಸಾದ್ ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ” ಎಂದಿದ್ದಾರೆ.

“ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಸಂತಾಪ ಸೂಚಿಸಿದ್ದಾರೆ.

ಮೈಸೂರಿಗೆ ಸಿಎಂ ಪ್ರಯಾಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಶ್ರೀನಿವಾಸ ಪ್ರಸಾದ್ ಅವರಿಗೆ ಅಂತಿಮ‌ ನಮನ ಸಲ್ಲಿಸಲಿದ್ದಾರೆ.

ಮೋದಿ ಸಂತಾಪ ಸೂಚನೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಹಿರಿಯ ನಾಯಕ ಹಾಗೂ ಚಾಮರಾಜನಗರದ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು ಅಂಚಿನಲ್ಲಿರುವವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ತಮ್ಮ ವಿವಿಧ ಸಮಾಜ ಸೇವೆಗಾಗಿ ಬಹಳ ಜನಪ್ರಿಯರಾಗಿದ್ದರು. ಓಂ ಶಾಂತಿ” ಎಂದು ಪ್ರಧಾನಿ ಮೋದಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ಪ್ರಾಮಾಣಿಕ ರಾಜಕಾರಣಿ: ಕುಮಾರಸ್ವಾಮಿ

“ಸರಳತೆ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವರು ಆಗಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನ ನನಗೆ ನೋವುಂಟು ಮಾಡಿದೆ. ತಮ್ಮ ಜೀವಿತಾವಧಿಯಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದ ಅವರ ರಾಜಕೀಯ ಜೀವನ ಮಾದರಿಯ ಹಾದಿ. ಆರು ಅವಧಿಗೆ ಸಂಸದರಾಗಿ, ಎರಡು ಅವಧಿಗೆ ಶಾಸಕರಾಗಿ ಅನನ್ಯ ಸೇವೆ ಸಲ್ಲಿಸಿರುವ ಶ್ರೀ ಪ್ರಸಾದ್ ಅವರು; 27 ವರ್ಷಗಳ ಸುದೀರ್ಘ ಸಂಸತ್ ಸದಸ್ಯರಾಗಿ 7 ಪ್ರಧಾನಿಗಳನ್ನು ಕಂಡಿದ್ದರು. ಅವರು ಅಪರೂಪದಲ್ಲಿ ಅಪರೂಪದ ಜನನಾಯಕರಾಗಿದ್ದರು. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ಮಾರ್ಗದರ್ಶಕನನ್ನು ಕಳೆದುಕೊಂಡೆ: ಬೊಮ್ಮಾಯಿ

ಕೇಂದ್ರದ ಮಾಜಿ ಸಚಿವರು, ಸಂಸದರು ಆಗಿದ್ದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ದುಖವಾಯಿತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

“ಶ್ರೀನಿವಾಸ ಪ್ರಸಾದ ಅವರು, ಶಾಸಕರಾಗಿ, ಸಂಸದರಾಗಿ ಸುಮಾರು ಐವತ್ತು ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದರು. ಶ್ರೀನಿವಾಸ ಪ್ರಸಾದ ಅವರ ಅಗಲಿಕೆಯಿಂದ ರಾಜ್ಯ ಒಬ್ಬ ಹಿರಿಯ ನಾಯಕ ಹಾಗೂ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ. ಅವರ ಕುಟುಂಬ ವರ್ಗ ಹಾಗೂ ಅವರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದು ಬೊಮ್ಮಾಯಿ ಸಂತಾಪದಲ್ಲಿ ತಿಳಿಸಿದ್ದಾರೆ.

ಸಚಿವ ಎಂ ಬಿ ಪಾಟೀಲ ಕಂಬನಿ

ಶ್ರೀನಿವಾಸ ಪ್ರಸಾದ್ ಅವರ ನಿಧನಕ್ಕೆ ಸಚಿವ ಎಂ ಬಿ ಪಾಟೀಲ ಕಂಬನಿ ಮಿಡಿದಿದ್ದು, “ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದವರಾಗಿದ್ದ ಪ್ರಸಾದ್ ಅವರು ಕೇಂದ್ರ ಸಚಿವರಾಗುವ ಹಂತಕ್ಕೆ ಬೆಳೆದಿದ್ದು ಒಂದು ದೊಡ್ಡ ಯಶೋಗಾಥೆಯಾಗಿದೆ. ಅವರು ದಲಿತರ ಸಬಲೀಕರಣಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ನಿಧನದಿಂದ ನಾಡು ಓರ್ವ ನೈಜ ನಾಯಕನನ್ನು ಕಳೆದುಕೊಂಡಿದೆ” ಎಂದಿದ್ದಾರೆ.

“ಸಂಸದರಾಗಿ, ಶಾಸಕರಾಗಿ, ಸಚಿವರಾಗಿ ಜನಾಭಿಪ್ರಾಯ ರೂಪಿಸಲು ಶಕ್ತರಾಗಿದ್ದ ಪ್ರಸಾದ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ತಮಗೆ ಸಿಕ್ಕಿದ್ದು ಸುಕೃತವಾಗಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಅವರು ಸ್ನೇಹ-ವಿಶ್ವಾಸಗಳಿಗೆ ಬೆಲೆ ಕೊಡುತ್ತಿದ್ದ ಸಹೃದಯಿಯಾಗಿದ್ದರು” ಎಂದು ಎಂ ಬಿ ಪಾಟೀಲ್‌ ಸ್ಮರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments