ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ ತಮ್ಮ ಜೇಬಲ್ಲಿಟ್ಟುಕೊಂಡಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಾಸನ ಸಂಸದರ ಪೆನ್ ಡ್ರೈವ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, “ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಹಾಸನ ನಾಯಕರ ವಿರುದ್ಧ ಲೈಂಗಿಕ ಹಗರಣ ಆರೋಪ ಬರುತ್ತಿದ್ದು, ಈ ಬಗ್ಗೆ ಎಸ್ಐಟಿ ತನಿಖೆ ಮಾಡಬೇಕು ಎಂದು ಕೇಳಿಕೊಂಡಿದೆ” ಎಂದರು.
“ಕುಮಾರಸ್ವಾಮಿ ಅವರು ತೋರಿಸುತ್ತಿದ್ದ ಪೆನ್ ಡ್ರೈವ್ ಯಾವುದು, ಅದರಲ್ಲಿ ಏನಿದೆ ಎಂಬುದು ಆಗ ನನಗೆ ಗೊತ್ತಿರಲಿಲ್ಲ. ಅದರಲ್ಲಿ ಏನಿದೆ ಎಂದು ಈಗ ಗೊತ್ತಾಯಿತು. ಈ ಪೆನ್ ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಚೆನ್ನಾಗಿ ಗೊತ್ತು. ಅವರ ಜೇಬಿನಲ್ಲೇ ಇಟ್ಟುಕೊಂಡಿದ್ದನ್ನು ಮಾಧ್ಯಮದವರಿಗೆ ತೋರಿಸಿದ್ದರು. ಹೀಗಾಗಿ ಇದರ ಬಗ್ಗೆ ಕುಮಾರಸ್ವಾಮಿ ಅವರನ್ನು ನೀವು ಕೇಳಬೇಕು. ಇದಕ್ಕೆ ಉತ್ತರಿಸಲು ಅವರೇ ಸೂಕ್ತ ವ್ಯಕ್ತಿ” ಎಂದು ಹೇಳಿದರು.
“ಮಾಧ್ಯಮಗಳು ಈ ಹಗರಣದ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ. ಅದು ಬರೀ ಹಾಸನದ ನಾಯಕನದಲ್ಲ. ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿಯದ್ದು, ಸಂಸದನದ್ದು. ಹೀಗಾಗಿ ಈ ವಿಚಾರವಾಗಿ ಪ್ರಧಾನಮಂತ್ರಿಗಳು, ವಿಜಯೇಂದ್ರ, ಶೋಭಕ್ಕ, ಅಶೋಕ್, ಕುಮಾರಣ್ಣ, ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದ ಅಶ್ವತ್ಥನಾರಾಯಣ ಅವರು ಉತ್ತರ ನೀಡಬೇಕು” ಎಂದು ಹೇಳಿದರು.
“ನಮ್ಮ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರೇ ದೂರು ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಮಹಿಳಾ ಆಯೋಗದ ಅಧ್ಯಕ್ಷರು ಇದೆಲ್ಲವನ್ನು ನೋಡಿ ರಾಜ್ಯ ಗೃಹ ಸಚಿವರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ನೀವು (ಮಾಧ್ಯಮದವರು) ಯಾಕೆ ಮೌನ ತಾಳುತ್ತಿದ್ದೀರಿ? ಈ ವಿಚಾರದಲ್ಲಿ ನೀವು ರಾಜ್ಯದ ಜನತೆಗೆ ಬೆಳಕು ಚೆಲ್ಲಬೇಕು” ಎಂದು ಮನವಿ ಮಾಡಿದರು.
ಎಸ್ಐಟಿ ತನಿಖೆ ಬಗ್ಗೆ ಸರ್ಕಾರದ ನಿಲುವೇನು ಎಂದು ಕೇಳಿದಾಗ, “ಈ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗಳನ್ನು ಕೇಳಬೇಕು. ನಾನು ಸರ್ಕಾರದ ಭಾಗವಾಗಿದ್ದರು, ಇನ್ನೂ ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಸಿಎಂ ಜತೆ ಚರ್ಚೆ ಮಾಡಲು ಆಗಿಲ್ಲ” ಎಂದರು.
ಸಂತ್ರಸ್ತ ಮಹಿಳೆಯರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆಯೇ ಎಂದು ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಬಹುಮುಖ್ಯ ಆಧಾರಸ್ತಂಭ. ನೀವು ನಿಮ್ಮ ನಡುವಣ ಪೈಪೋಟಿ, ಆಂತರಿಕ ವಿಚಾರಕ್ಕೆ, ಬೇರೆಯವರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಇಂತಹ ದೊಡ್ಡ ವಿಚಾರಗಳನ್ನು ಮುಚ್ಚಿಹಾಕುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಭಾವಿಸುತ್ತೇನೆ. ನಮ್ಮ ಆತ್ಮಸಾಕ್ಷಿಗಾದರೂ ನಾವು ಕೆಲಸ ಮಾಡಬೇಕು ಅಲ್ಲವೇ” ಎಂದರು.