ಪ್ರತಾಪ್ ಸಿಂಹ, ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದು ಯಾರು ದೇವೇಗೌಡರೇ? ಒಕ್ಕಲಿಗ ಸಮುದಾಯದ ನಾಯಕರಿಗೆ ಅತಿ ಹೆಚ್ಚು ಅನ್ಯಾಯ ಆಗಿದ್ದರೆ ಅದು ಬಿಜೆಪಿ, ಜೆಡಿಎಸ್‌ನಿಂದಲೇ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಂಡ್ಯ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರವಾಗಿ ಪ್ರಜಾಧ್ವನಿ-2 ಜನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ಮೋದಿಯವರಿಗೆ ಕರ್ನಾಟಕ ನೆನಪಾಗುವುದೇ ಚುನಾವಣೆ ಬಂದಾಗ. ಬರಗಾಲ ಬಂದಾಗಲೂ ರಾಜ್ಯದ ಕಡೆ ತಲೆ ಹಾಕಲಿಲ್ಲ. ಪ್ರವಾಹ ಬಂದಾಗ ರಾಜ್ಯದ ಕಡೆ ತಿರುಗಿಯೂ ನೋಡಲಿಲ್ಲ. ಚುನಾವಣೆ ಬಂತು ನೋಡಿ ಮೋದಿ ಓಡೋಡಿ ಬಂದಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಮೋದಿಯವರನ್ನು ವಾಚಾಮಗೋಚರವಾಗಿ ಟೀಕಿಸುತ್ತಿದ್ದ ದೇವೇಗೌಡರು ಈಗ ಮೋದಿಗೂ ತಮಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಅಷ್ಟು ಚೆನ್ನಾಗಿದ್ದರೆ ಮೋದಿಯವರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ದೇವೇಗೌಡರು ಸರಿಪಡಿಸಲಿ ನೋಡೋಣ. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ ನೋಡೋಣ” ಎಂದು ಸವಾಲು ಹಾಕಿದರು.
“ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಗೆಲುವು ಶತಸಿದ್ಧ. ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಮ್ಮನಸ್ಸಿನಿಂದ, ಒಟ್ಟಿಗೇ ಕಾಂಗ್ರೆಸ್ ಗೆಲ್ಲಿಸಲು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ಬೀಳುವುದು ಖಚಿತ” ಎಂದರು.
ಕುಮಾರಸ್ವಾಮಿ ಅವರು ಮಾಡಿದ್ದೇನು?
“ಕೆಂಪೇಗೌಡ ಜಯಂತಿ ಆರಂಭಿಸಿದ್ದು ನಾವು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾವು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ನಾವು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮಾಡಿದ್ದೇನು” ಎಂದು ಸಿಎಂ ಪ್ರಶ್ನಿಸಿದರು.