ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ಗೆ 28 ಕ್ಷೇತ್ರಗಳ ಫೈಕಿ ಮೂರು ಕ್ಷೇತ್ರಗಳು ಸಿಕ್ಕಿದ್ದು, ಕೊನೆಗೂ ಅಭ್ಯರ್ಥಿಗನ್ನು ಜೆಡಿಎಸ್ ಫೈನಲ್ ಮಾಡಿದೆ.
ಮೂರು ಕ್ಷೇತ್ರಗಳಾದ ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುತ್ತಿದ್ದಾರೆ. ಹಾಗೆಯೇ ಕೋಲಾರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಎಂ ಮಲ್ಲೇಶ್ ಬಾಬುಗೆ ಟ ಟಿಕೆಟ್ ನೀಡಲಾಗಿದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಮೃದ್ಧಿ ಮಂಜುನಾಥ, ಮಲ್ಲೇಶ್ ಬಾಬು ಹಾಗೂ ನಿಸರ್ಗ ನಾರಾಯಣಸ್ವಾಮಿ ಅವರು ಟಿಕೆಟ್ಗಾಗಿ ದಳಪತಿಗಳ ಮುಂದೆ ಬೇಡಿಕೆ ಇಟ್ಟಿದ್ದರು. ಕೊನೆ ಕ್ಷಣದವರೆಗೂ ಸಮೃದ್ಧಿ ಮಂಜುನಾಥ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ಮಲ್ಲೇಶ್ ಬಾಬು ಅವರಿಗೆ ದಳಪತಿಗಳು ಮಣೆ ಹಾಕಿದ್ದಾರೆ.
ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವ ಮಾತುಗಳು ಕೇಳಿಬಂದಿದ್ದವು. ಈ ನಡುವೆ ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕ ಸಿ ಎಸ್ ಪುಟ್ಟರಾಜು ಅವರನ್ನ ಕಣಕ್ಕಿಳಿಸುವುದಾಗಿ ಹೇಳಿದ್ದರು. ಈಗ ಕೊನೆಗೆ ಕುಮಾರಸ್ವಾಮಿ ಅವರೇ ಸ್ಪರ್ಧೆಗೆ ಮುಂದಾಗಿದ್ದಾರೆ.