ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ. ದಾಖಲೆಗಳ ಸಮೇತ ಜನರೆದುರು, ಕನ್ನಡಿಗರ ಎದುರು ಚರ್ಚೆಗೆ ಬನ್ನಿ. ನೀವು ಕರೆದ ಜಾಗಕ್ಕೆ ನಾನು ಬರ್ತೀನಿ. ನೀವು ರೆಡಿನಾ?” ಎಂದು ಸವಾಲು ಹಾಕಿದ್ದಾರೆ.
ಮೈಸೂರು ನಗರದ ಇಂದಿರಗಾಂಧಿ ಕಾಂಗ್ರೆಸ್ ಭವನದ ಮೈದಾನದಲ್ಲಿ ಇಂದು ಆಯೋಜಿಸಿದ್ದ, ಚಾಮರಾಜ, ಕೃಷ್ಣರಾಜ , ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
“ಬರೀ ಡೈಲಾಗ್ ಹೊಡ್ಕೊಂಡು 10 ವರ್ಷ ಮುಗಿಸಿದ್ರಲ್ಲಾ ಇದು ದೇಶದ ಜನರಿಗೆ ಮಾಡಿದ ಅವಮಾನ ಅಲ್ವಾ? ನಿಮ್ಮ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂದ್ರು. 15 ಪೈಸೆನಾದ್ರೂ ಹಾಕಿದ್ರಾ?
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ, ನಿರ್ಮಲಾ ಸೀತಾರಾಮನ್ ಒಂದೇ ಒಂದು ಪೈಸೆ ಕೊಡೋದು ಬೇಡ. ಕನ್ನಡಿಗರ ಪಾಲಿನ ತೆರಿಗೆ ಪಾಲು ಕೊಟ್ಟರೆ ಸಾಕು” ಎಂದಿದ್ದಾರೆ.
“ಒಂದು ವರ್ಷಕ್ಕೆ ಕನ್ನಡಿಗರು ಒಂದು ಲಕ್ಷದ 30 ಸಾವಿರ ಕೋಟಿ ರೂಪಾಯಿ ಕೇಂದ್ರಕ್ಕೆ ಕೊಡ್ತಾರೆ. ಇದರಲ್ಲಿ ಕನ್ನಡಿಗರಿಗೆ ವಾಪಾಸ್ ಬರುವುದು ಕೇವಲ 53 ಸಾವಿರ ಕೋಟಿ. ಈ ಅನ್ಯಾಯವನ್ನು ಸರಿ ಮಾಡಿ ಕನ್ನಡಿಗರ ಕೂಗಿಗೆ, ಕನ್ನಡಿಗರ ಶ್ರಮಕ್ಕೆ ಬೆಲೆ ಕೊಡಿ” ಎಂದು ಕಿಡಿಕಾರಿದರು.
“ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ನಿಮ್ಮೆಲ್ಲರ ಧ್ವನಿ. ನಮ್ಮೆಲ್ಲರ ಧ್ವನಿ. ಇವರು ಗೆಲ್ಲುವುದು ಖಚಿತ. ಲಕ್ಷ್ಮಣ್ ಗೆದ್ದರೆ ನಾನು, ನೀವು ಗೆದ್ದಂತೆ. ಬಿಜೆಪಿಯನ್ನು ನಿರಂತರವಾಗಿ ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬೀದಿ ಹೋರಾಟಗಳ ಮೂಲಕ ಬೆಳೆದವರು ಲಕ್ಷ್ಮಣ್” ಎಂದು ಮೆಚ್ಚುಗೆ ಸೂಚಿಸಿದರು.
“ಬಿಜೆಪಿಯ ಹುಟ್ಟು ಮತ್ತು ಇತಿಹಾಸವನ್ನು ಸರಿಯಾಗಿ ಗಮನಿಸಿ. ಬಿಜೆಪಿ ತನ್ನ ಆಚರಣೆಯಲ್ಲಿ ಬಹುಸಂಖ್ಯಾತರ ವಿರೋಧಿಯಾದ ಪಕ್ಷ. ಶೂದ್ರರು, ದಲಿತರನ್ನು ಸಮಸ್ತ ಮಹಿಳೆಯರನ್ನು ಅಕ್ಷರ ಸಂಸ್ಕೃತಿಯಿಂದ, ಶಿಕ್ಷಣದಿಂದ ದೂರ ಇಡಬೇಕು ಎನ್ನುವುದು ಮನುಸ್ಮೃತಿಯ ಸಿದ್ಧಾಂತ. ಈ ಸಿದ್ಧಾಂತ ಅಸಮಾನತೆಯನ್ನು, ಜಾತಿ ತಾರತಮ್ಯವನ್ನು ಸ್ಪಷ್ಟವಾಗಿ ಬೆಂಬಲಿಸುತ್ತದೆ. ಆದ್ದರಿಂದ ಇದು ಭಾರತದ ಬಹು ಸಂಖ್ಯಾತ ದುಡಿಯುವ ವರ್ಗಗಳ ವಿರೋಧಿ ಪಕ್ಷ” ಎಂದು ನೆರೆದಿದ್ದ ಕಾರ್ಯಕರ್ತರಿಗೆ ಮನವರಿಕೆ ಮಾಡಿಸಿದರು.