ಮಾಜಿ ಸಚಿವ ಡಾ ಕೆ ಸುಧಾಕರ್ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರಿಂದಲೇ ಸುಧಾಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ ಜೋರಾಗಿ ನಡೆಯುತ್ತಿದೆ.
ಸುಧಾಕರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಹಳೆ ಯಲಹಂಕ ಸಂತೆ ವೃತ್ತದ ಕೆಂಪೇಗೌಡ ಪ್ರತಿಮೆ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು ‘ಗೋಬ್ಯಾಕ್ ಸುಧಾಕರ್’ ಎಂದು ಘೋಷಣೆ ಕೂಗಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ಅನ್ನು ಸಿದ್ದರಾಮಯ್ಯ ಅವರು ಮಂಡಿಸುವಾಗ, “ಏನಿಲ್ಲ, ಏನಿಲ್ಲ, ಬಜೆಟ್ನಲ್ಲಿ ಏನಿಲ್ಲ..” ಎಂದು ರೀಲ್ಸ್ವೊಂದರ ಹಾಡನ್ನು ಜೋಡಿಸಿ ಬಿಜೆಪಿಯವರು ಬಜೆಟ್ ವಿರೋಧಿಸಿದ್ದರು. ಇದೇ ಹಾಡನ್ನೇ ಬಿಜೆಪಿ ಕಾರ್ಯಕರ್ತರು ಸುಧಾಕರ್ ಮೇಲೆ ಹಾಡಿದ್ದಾರೆ.
“ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಲೋಕಸಭೆಗೆ ನೀ ಲಾಯಕ್ಕಿಲ್ಲ..” ಎಂದು ರೀಲ್ಸ್ ದಾಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಚಿಕ್ಕಬಳ್ಳಾಪುರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಎಸ್ ಆರ್ ವಿಶ್ವನಾಥ್ ಅವರೇ ನಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ಸೋಲು ಕಂಡಿದ್ದ ಡಾ ಕೆ ಸುಧಾಕರ್ ಅವರಿಗೆ ಟಿಕೆಟ್ ನೀಡಿದೆ. ಹೈಕಮಾಂಡ್ನ ಈ ನಿರ್ಧಾರದ ವಿರುದ್ಧ ಇದೀಗ ಬಿಜೆಪಿ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ.