ಅನಂತಕುಮಾರ್ ಹೆಗಡೆ ಅಲ್ಲ, ಅವರ ಅಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ರಾಜುಗೌಡ ಅವರು ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿರುವ ಬಿಜೆಪಿ ಸಂಸದ ಅನಂತಕುಮಾರ್ ಹಗಡೆ ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಸ್ವಪಕ್ಷ ನಾಯಕರು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ ರಾಜುಗೌಡ ಹೇಳಿಕೆ ಅಚ್ಚರಿ ಮೂಡಿಸಿದೆ.
ಯಾದಗಿರಿ ನಗರದಲ್ಲಿ ಮಾತನಾಡಿದ ರಾಜುಗೌಡ, “ಅನಂತಕುಮಾರ್ ಹೆಗಡೆ ಇದೇ ತರಹ 2018 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬರೋದ್ದಕ್ಕೆ ಕಲ್ಲು ಹಾಕಿದ್ದರು. ಹಿಂದುತ್ವ, ಮೋದಿ ಗಾಳಿಯಲ್ಲಿ ಸಂಸದರಾಗುತ್ತಾರೆ. ಸಂಸದರಾದ ಮೇಲೆ ನಾಲ್ಕು ವರ್ಷ ಮಾಯ ಆಗಿಬಿಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಂಬೇಡ್ಕರ್ ಅವರಿಗೆ ಮೋದಿ ಅವರಷ್ಟು ಗೌರವ ಕೊಡುವ ನಾಯಕ ಮತ್ತೊಬ್ಬರಿಲ್ಲ. ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಮೋದಿ ಅವರು ಹೊರಟಿದ್ದಾರೆ. ನಾಲ್ಕು ವರ್ಷ ಕಾಣೆ ಆಗಿದ್ದಕ್ಕೆ ಈ ರೀತಿ ಹೇಳಿಕೆ ನೀಡಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ” ಎಂದು ಕುಟುಕಿದರು.