Homeಕರ್ನಾಟಕಬರಗಾಲ | ರಾಜ್ಯದಲ್ಲಿ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ಆರ್‌ ಅಶೋಕ್‌

ಬರಗಾಲ | ರಾಜ್ಯದಲ್ಲಿ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ಆರ್‌ ಅಶೋಕ್‌

ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆ ಎಂಬಂತೆ ಇಲ್ಲಿ ಜನ ಜಲಕ್ಷಾಮದಿಂದ ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದರೆ, ಅತ್ತ ಸಿಎಂ ಸಿದ್ದರಾಮಯ್ಯನವರು ಗ್ಯಾರಂಟಿ ಸಮಾವೇಶದ ಹೆಸರಿನಲ್ಲಿ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, “ರಾಜ್ಯದಲ್ಲಿ 900 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಲಕ್ಷಾಂತರ ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಊರು ಬಿಟ್ಟು ಗುಳೇ ಹೋಗಿದ್ದಾರೆ, 40ಕ್ಕೂ ಹೆಚ್ಚು ನೇಕಾರರು ದಿಕ್ಕು ಕಾಣದೆ ಜೀವ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜನ ತೊಟ್ಟು ನೀರಿಗೂ ಪರದಾಡುತ್ತಿದ್ದಾರೆ” ಎಂದಿದ್ದಾರೆ.

“ರಾಜ್ಯದಲ್ಲಿ ಇಂತಹ ಸೂತಕದ ವಾತಾವರಣ ಇರುವಾಗ ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ, ಪ್ರತಿ ಜಿಲ್ಲೆಗೆ ಒಂದು ಕೋಟಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮಗಳಿಗೆ ಎರಡು ಕೋಟಿ ಖರ್ಚು ಮಾಡಿ ಉತ್ಸವ ಮಾಡುತ್ತಿದೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ನಿಮಗೆ ಕಿಂಚಿತ್ತಾದರೂ ಮಾನವೀಯತೆ, ಕರ್ತವ್ಯ ಪ್ರಜ್ಞೆ ಇದೆಯೇ” ಎಂದು ಪ್ರಶ್ನಿಸಿದ್ದಾರೆ.

“ಗ್ಯಾರಂಟಿ ಸಮಾವೇಶಕ್ಕಾಗಿ ನೂರಾರು ಕೋಟಿ ಪೋಲು ಮಾಡುವ ಬದಲು ಜನರಿಗೆ ನೀರಿನ ವ್ಯವಸ್ಥೆ ಮಾಡಬಹುದಿತ್ತಲ್ಲ? ಅದೇ ದುಡ್ಡಿನಲ್ಲಿ ರೈತರಿಗೆ ಬರ ಪರಿಹಾರ ಕೂಡಬಹುದಿತ್ತಲ್ಲವೆ? ರಾಜ್ಯದ ಜನತೆ ಇಲ್ಲಿ ಅವಸ್ಥೆ ಪಡುತ್ತಿದ್ದರೆ ನಿಮಗೆ ಚುನಾವಣಾ ಪ್ರಚಾರವೇ ಹೆಚ್ಚಾಗಿ ಹೋಯಿತೇ?” ಎಂದು ಅಶೋಕ್‌ ಕುಟುಕಿದ್ದಾರೆ.

“ಹಸಿವು ಮುಕ್ತ ಕರ್ನಾಟಕ ಮಾಡಿದ್ದೇವೆ ಎಂದು ಬೊಗಳೆ ಭಾಷಣ ಬಿಡುವ ಸಿಎಂ ಸಿದ್ದರಾಮಯ್ಯ ನವರು ಕಳೆದ ಮೂರು ತಿಂಗಳಿಂದ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ತೊಗರಿ ಬೇಳೆ, ಅಡುಗೆ ಎಣ್ಣೆ, ತರಕಾರಿ ವಿತರಣೆ ಮಾಡದೇ ಪರೀಕ್ಷೆಗಳ ಸಮಯದಲ್ಲಿ ಬಡ ಮಕ್ಕಳನ್ನು ಹಸಿನಿವಿಂದ ಬಳಲಿಸುತ್ತಿದ್ದಾರೆ. ಕೋಟಿ ಕೋಟಿ ಹಣ ಖರ್ಚು ಮಾಡಿ ಗ್ಯಾರಂಟಿ ಸಮಾವೇಶಗಳನ್ನು ಮಾಡಲು ಕಾಂಗ್ರೆಸ್‌ ಸರ್ಕಾರದ ಬಳಿ ದುಡ್ಡಿದೆ. ಆದರೆ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ದಿನಸಿ, ತರಕಾರಿ ಸರಬರಾಜು ಮಾಡಲು ದುಡ್ಡಿಲ್ಲ. ಇಂತಹ ಬರಗೆಟ್ಟ, ಮಾನಗೆಟ್ಟ ಸರ್ಕಾರ ರಾಜ್ಯದ ಇತಿಹಸದಲ್ಲೆ ಮತ್ತೊಂದಿಲ್ಲ. ಬಡ ಮಕ್ಕಳ ಹಸಿವಿನ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು” ಎಂದು ಹರಿಹಾಯ್ದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments