ನಾಳೆಯಿಂದ (ಫೆ.22) ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರವು 60 ಲಕ್ಷ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ನಿರ್ಧರಿಸಿದೆ. ಇದೇ ತಿಂಗಳು 22 ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ” ಎಂದರು.
ಕೆಎಫ್ಡಿ ಕಾಯಿಲೆಯಿಂದ ಮೃತಪಟ್ಟವರಿಗೆ ಪರಿಹಾರ ಕೊಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, “ಕೆಎಫ್ಡಿಯಿಂದ ಮೃತಪಟ್ಟವರಿಗೆ ಪರಿಹಾರ ಕೊಡಬೇಕು ಎಂದು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಕೆಎಫ್ಡಿಯಿಂದ ಮೃತಪಟ್ಟವರ ಮಾಹಿತಿ ಕೊಡಲು ಸೂಚಿಸಿದ್ದೇನೆ. ಪರಿಹಾರ ಕೊಡುವ ಬಗ್ಗೆ ಗಮನ ಹರಿಸಲಾಗುವುದು” ಎಂದು ಹೇಳಿದರು.
ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರಕಾರ ಪರಿಹಾರ ನೀಡುತ್ತಿರುವ ಸಂಬಂಧ ಪ್ರತಿಕ್ರಿಯಿಸಿ, “ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಸತ್ಯಸಾಯಿ ಬಾಬಾ ಆಸ್ಪತ್ರೆಗೆ 2 ಕೋಟಿ ಕೊಟ್ಟಿದ್ದರು. ಅದಕ್ಕೂ ವಿರೋಧ ಬಂದಿತ್ತು. ನಮ್ಮ ರಾಜ್ಯದ ರೋಗಿಗಳು ಆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ ಅಂದಿದ್ದರು. ಅದೇ ರೀತಿ ಆನೆ ತುಳಿದು ಮೃತಪಟ್ಟಿದ್ದಕ್ಕೆ ಪರಿಹಾರ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಯಾವುದೇ ಕೆಲಸ ಇಲ್ಲ. ಅದಕ್ಕೆ ಇಂತಹ ಕೆಲಸ ಮಾಡ್ತಾರೆ. ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಘೋಷವಾಕ್ಯ ಬದಲಾವಣೆಗೆ ಸರ್ಕಾರ ಯಾವುದೇ ಆದೇಶ ಮಾಡಿರಲಿಲ್ಲ. ಯಾವುದೋ ವಾಟ್ಸಾಪ್ ನಲ್ಲಿ ಬಂದ ಮೆಸೇಜ್ನಿಂದ ಗೊಂದಲವಾಗಿದೆ” ಎಂದು ತಿಳಿಸಿದರು.
“ಶಿವಮೊಗ್ಗ ಜಿಲ್ಲೆಗೆ 100 ಹೊಸ ಸಾರಿಗೆ ಬಸ್ ಕೇಳಿದ್ದೆ. ಸದ್ಯಕ್ಕೆ 10 ಬಸ್ ಬಂದಿದೆ. ಫೆ.24 ರಂದು ನಡೆಯುವ ಗ್ಯಾರಂಟಿ ಸಮಾವೇಶದಲ್ಲಿ ಬಸ್ ಉದ್ಘಾಟಿಸಲಾಗುವುದು” ಇದೇ ವೇಳೆ ಮಧು ಬಂಗಾರಪ್ಪ ಹೇಳಿದರು.