ರಾಜ್ಯದ ಬೊಕ್ಕಸ ಬರಿದಾಗಿಲ್ಲ, ರಾಜ್ಯದ ಖಜಾನೆ ಖಾಲಿಯಾಗಿಲ್ಲ ಎಂದು ತಮ್ಮ ಕಿತ್ತೋಗಿರುವ ಸರ್ಕಾರಕ್ಕೆ ತೇಪೆ ಹಾಕುವ ಕೆಲಸ ಮಾಡುತೀರಲ್ಲ ಸಿಎಂ ಸಿದ್ದರಾಮಯ್ಯನವರೇ, ಕಳೆದ ಆರು ತಿಂಗಳಿಂದ ವೃದ್ಧಾಪ್ಯ, ವಿಧವಾ, ವಿಕಲಚೇತನರ ಮಾಸಾಶನ ನೀಡಿಲ್ಲವೇಕೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕ ಪ್ರಶ್ನಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇನರಿಗೆ ರಾಜ್ಯ ಸರ್ಕಾರ ಮಾಸಾಶನ ನೀಡುತ್ತಿದೆ. ಆದರೆ ಕಳೆದ ಐದಾರು ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಕಳೆದ ಐದಾರು ತಿಂಗಳುಗಳಿಂದ ಫಲಾನುಭವಿಗಳಿಗೆ ಮಾಸಾಶನ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಆರ್. ಅಶೋಕ್ ಟ್ವೀಟ್ ಮಾಡಿ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
“ಭ್ರಷ್ಟಾಚಾರ, ಕಮಿಷನ್, ಅವೈಜ್ಞಾನಿಕ ನೀತಿಗಳಿಂದ ರಾಜ್ಯದ ತೆರಿಗೆ ಹಣವನ್ನ ಲೂಟಿ ಮಾಡಿರುವ ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಪಿಂಚಣಿ ನೀಡಲೂ ಹಣವಿಲ್ಲದ ಶೋಚನೀಯ ಪರಿಸ್ಥಿತಿಯಲ್ಲಿದೆ” ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಸೆರೆಹಿಡಿಯಲಾದ ಆನೆಯಿಂದ ಕೊಲ್ಲಲ್ಪಟ್ಟ ಕೇರಳದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರವು ಪರಿಹಾರವಾಗಿ ₹15 ಲಕ್ಷವನ್ನು ಮಂಜೂರು ಮಾಡಿದೆ. ಕನ್ನಡಿಗರ ತೆರಿಗೆ ಹಣವನ್ನ ಕೇರಳ ಸಂಸದರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಅಣತಿಯಂತೆ ಬಿಡುಗಡೆ ಮಾಡಲು ಕರ್ನಾಟಕವೇನು ಕಾಂಗ್ರೆಸ್ ಪಕ್ಷದ ಆಸ್ತಿ ಅಂದುಕೊಂಡಿದ್ದೀರಾ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ” ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.
“ಕನ್ನಡಿಗರ ತೆರಿಗೆ ರಾಹುಲ್ ಗಾಂಧಿ ಜೇಬಿಗೆ ಎಂದು ಕುಟುಕಿದ ಅಶೋಕ್, ಸಿಎಂ ಸಿದ್ದರಾಮಯ್ಯನವರೇ, ಇದು ನಮ್ಮ ತೆರಿಗೆ, ನಮ್ಮ ಹಕ್ಕು’ ಅಂತ ನಿಮ್ಮ ಪಕ್ಷದ ಹೈಕಮಾಂಡ್ ನಾಯಕರ ಬಳಿ ‘ಧೈರ್ಯವಾಗಿ ಪ್ರಶ್ನಿಸಲು’ ನಿಮ್ಮ ಸಚಿವರಿಗೆ ತಾಕತ್ತಿಲ್ಲವೇ?” ಎಂದು ಕಿಡಿಕಾರಿದ್ದಾರೆ.