ಜ್ಞಾನ ದೇಗುಲವಿದು ಎಂಬ ಘೋಷವಾಕ್ಯಕ್ಕೆ ಸಂಬಂಧಿಸಿದಂತೆ ಬೆಳಗಿನಿಂದ ಮಾಧ್ಯಮಗಳಲ್ಲಿ ಸುದ್ದಿಯು ಬಿತ್ತರವಾಗುತ್ತಿದೆ. ಸರ್ಕಾರದ ವತಿಯಿಂದ ಈಗ ಪ್ರಸ್ತುತ ಇರುವ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶ ಹೊರಡಿಸಲಾಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, “ಸೃಜನಾತ್ಮಕ ಕಲಿಕೆಯ ದೃಷ್ಟಿಯಿಂದ, ಮಕ್ಕಳಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆಯನ್ನು ಮೂಡಿಸಿ ಅವರಲ್ಲಿ ಯೋಚನಾ ಶಕ್ತಿಯನ್ನು ಹರಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದ ಗುಂಪಿನಲ್ಲಿ ಚರ್ಚೆಯನ್ನು ನಡೆಸಿದ್ದು, ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ ಎಂದು ಶಾಲೆಗಳಲ್ಲಿ ಹಾಕಿದರೆ ಹೇಗೆ? ಎಂಬ ಆಲೋಚನೆಯನ್ನು ಕೆಲವರು ಮುಂದಿಟ್ಟಾಗ, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ” ಎಂದು ತಿಳಿಸಿದ್ದಾರೆ.
“ಉತ್ತಮ ಆಲೋಚನೆಯನ್ನು ಹೊಂದಿದ ಈ ಸಾಲನ್ನು ಕೆಲವರು ಶಾಲೆಗಳಲ್ಲೂ ಬಳಸಿರುತ್ತಾರೆ. ಅಂದಹಾಗೆ ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ ಎಂದರೆ ಅದು ಕುವೆಂಪು ಅವರು ಹೇಳುವ ವಿಚಾರ ಕ್ರಾಂತಿಗೆ ಆಹ್ವಾನ ಪ್ರಬಂಧದ ಆಶಯವೇ ಆಗಿದ್ದು ಕುವೆಂಪು ಅವರಿಗೆ ಅವಮಾನ ಎಸಗುವ ಯಾವುದೇ ಪ್ರಮಾದವು ಇಲ್ಲಿ ಜರುಗಿರುವುದಿಲ್ಲ” ಎಂದು ಹೇಳಿದ್ದಾರೆ.
“ಶಿಕ್ಷಣದ ಉದ್ದೇಶವೇ ಮಕ್ಕಳಲ್ಲಿ ವೈಚಾರಿಕತೆಯ ಜೊತೆಗೆ, ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸುವುದಾಗಿದೆ. ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್ ಸ್ಟೀನ್ ನಿಂದ ಹಿಡಿದು ಬಹಳಷ್ಟು ವಿಜ್ಞಾನಿಗಳು ಇದನ್ನೇ ಪ್ರತಿಪಾದಿಸಿದ್ದು ಕಲಿಯುವ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಆಲೋಚನೆಗಳನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ನನ್ನ ಪ್ರಕಾರ ಇದೊಂದು ವಿವಾದದ ಅಂಶವೇ ಅಲ್ಲ” ಎಂದು ಮಹದೇವಪ್ಪ ತಿಳಿಸಿದ್ದಾರೆ.