“ನಮ್ಮ ಸರ್ಕಾರ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಯನ್ನು ಪರಿಚಯಿಸಿದೆ. ಬಸವಣ್ಮನವರ ನುಡಿದಂತೆ ನಡೆಯಬೇಕು ಎನ್ನುವ ತತ್ವದಂತೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಡಿಸಿಎಂ ಅವರು ಸೋಮವಾರ ಪ್ರತಿಕ್ರಿಯೆ ನೀಡಿ, “ನಾವು ಆರಂಭಿಸಿದ ಗ್ಯಾರಂಟಿಗಳನ್ನು ನೋಡಿ ಪ್ರಧಾನಿಗಳು ಈಗ ಅದನ್ನೇ ಪ್ರಚಾರಕ್ಕೆ ಬಳಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಮಾಡಲಾಗದನ್ನು ನಾವು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಇದನ್ನು ವಿರೋಧ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ” ಎಂದರು.
ಕೇಸರಿ ಯಾರ ಮನೆಯ ಆಸ್ತಿಯಲ್ಲ
ಬಿಜೆಪಿ ನಾಯಕರು ಕೇಸರಿ ಶಾಲು ಧರಿಸಿ ಸದನಕ್ಕೆ ಬಂದ ಬಗ್ಗೆ ಕೇಳಿದಾಗ, “ಅವರು ಏನಾದರೂ ಹಾಕಿಕೊಂಡು ಬರಲಿ. ಕೇಸರಿ ಅವರ ಮನೆ ಆಸ್ತಿಯೇ? ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ. ಅವರು ಕೇಸರಿಯಾದರೂ ಧರಿಸಲಿ, ಕಪ್ಪಾದರೂ ಧರಿಸಲಿ. ನಮ್ಮ ರಾಜ್ಯದ ಹಿತಕ್ಕೆ ಬೇಕಾದ ಕೆಲಸ ನಾವು ಮಾಡುತ್ತೇವೆ” ಎಂದರು.