Homeಕರ್ನಾಟಕರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿಸಿದೆ: ಆರ್ ಅಶೋಕ್ ಟೀಕೆ

ರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿಸಿದೆ: ಆರ್ ಅಶೋಕ್ ಟೀಕೆ

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದೆ. ಇದೊಂದು ಲೂಟಿ ಸರ್ಕಾರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದರು.

ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಭಾಷಣ ಮುಗಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, “ಜನರ ಹಣವನ್ನು ಕೊಳ್ಳೆ ಹೊಡೆಯುವುದೇ ಸರ್ಕಾರದ ಕೆಲಸ ಆಗಿದೆ” ಎಂದು ಆರೋಪಿಸಿದರು.

“ಕೋಮುವಾದಕ್ಕೆ ಉತ್ತೇಜನ ನೀಡುವ ಕೆಲಸ ಆಗಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು, ಕೇಂದ್ರದ ಯೋಜನೆಯನ್ನು ನಾವೇ ತಂದಿದ್ದೀವಿ, ನಾವೇ ಮಾಡಿದ್ದು ಎಂದು ರಾಜ್ಯ ಸರ್ಕಾರ ಬೆನ್ನು ತಟ್ಟಿಕೊಂಡಿದೆ. ಐದನೇ ಗ್ಯಾರಂಟಿ ಪ್ರಾರಂಭವೇ ಆಗಿಲ್ಲ. ಒಬ್ಬ ನಿರುದ್ಯೋಗಿ ಯುವಕನಿಗೆ ಒಂದು ರೂಪಾಯಿ ಸಿಕ್ಕಿಲ್ಲ” ಎಂದು ಕಿಡಿಕಾರಿದರು.

“ಬರ ಪರಿಸ್ಥಿತಿ 25 ಸಾವಿರ ಪರಿಹಾರ ನೀಡಬೇಕು ಅಂತ ಒತ್ತಾಯ ಮಾಡಿದ್ದೆವು. ಬರದ ವಿಚಾರದಲ್ಲಿ ಎರಡು ಸಾವಿರ ಹಣ ಕೊಟ್ಟಿಲ್ಲ. ಕಂತು ಕಂತು ಆಗಿ ಹೋಗಿದೆ ಅಂತೆ. ರೈತರಿಗೆ ಮೋಸ ಮಾಡುತ್ತಾ ಇದ್ದಾರೆ. ಕೇಂದ್ರದ ಮೇಲೆ ಗೂಬೆ ಕುರಿಸುವ ಕೆಲಸ ಆಗುತ್ತಿದೆ. ಅಭಿವೃದ್ಧಿ ಕುಂಠಿತ ಆಗಿದೆ” ಎಂದರು.

“ಮಕ್ಕಳಿಗೆ ಚಿಕ್ಕಿ, ಮೊಟ್ಟೆ ಕೊಡುತ್ತಿದ್ದೇವೆ ಎನ್ನುತ್ತಾರೆ. ಮೊಟ್ಟೆ, ಚಿಕ್ಕಿ ಕೊಟ್ಟು ಶೌಚಾಲಯ ಕ್ಲಿನ್ ಮಾಡಿಸುವ ಕೆಲಸ ಆಗುತ್ತಿದೆ. ಶಿವಮೊಗ್ಗ ಏರ್ಪೋರ್ಟ್ ಕಾಮಗಾರಿ ಮುಗಿದಿದ್ದು, ಅದು ನಮ್ಮದು ಅಂತ ಹೇಳಿದ್ದಾರೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಹಣ ನಿಡುವುದು. ಅದನ್ನೂ ತಮ್ಮದೇ ಎಂದು ಹೇಳಿಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಹಿಂದುಗಳ ಮೇಲೆ ದೌರ್ಜನ್ಯ ಆಗುತ್ತಾ ಇದೆ. ಭಯೋತ್ಪಾದಕ ಚಟುವಟಿಕೆಗಳು ಜಾಸ್ತಿ ಆಗಿವೆ. ಇಷ್ಟೆಲ್ಲ ಆದರೂ ಶಾಂತಿ ಸುವ್ಯವಸ್ಥೆ ಕಾಪಾಡ್ತೀನಿ ಅಂತ ಹೇಳುತ್ತಿದ್ದಾರೆ. ಕನ್ನಡ ರಕ್ಷಣೆ ಮಾಡ್ತೀವಿ ಅಂತ ಹೇಳಿ ಕನ್ನಡ ಹೋರಾಟಗಾರರನ್ನು ಜೈಲಿಗೆ ಅಟ್ಟಿದ ದುಷ್ಟ ಸರ್ಕಾರ ಇದು. ಎಸ್​​ಸಿ, ಎಸ್ಟಿ ಹಣ ಬೇರೆ ಯೋಜನೆಗಳಿಗೆ ಬಳಸಿ ಮೋಸ ಮಾಡಿದ್ದಾರೆ” ಎಂದು ದೂರಿದರು.

ಜನವಿರೋಧಿ ಸರ್ಕಾರ: ಬೊಮ್ಮಾಯಿ

ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ. ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿದರು.

“ನಮ್ಮ ಅವಧಿಯ ಕೆಲಸಗಳನ್ನು ತಾವು ಮಾಡಿದ್ದಾಗಿ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಂದ ಹೇಳಿಸಿದೆ ಈ ಸರ್ಕಾರ ರಾಜ್ಯಪಾಲರ ಮೂಲಕ ಸುಳ್ಳು ಭಾಷಣ ಮಾಡಿಸಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾದರಿ ಎಂದು ಬಿಂಬಿಸಿಕೊಂಡಿದೆ. ಕರ್ನಾಟಕ ಮಾಡೆಲ್ ಅಂದರೆ ಏನು ಎಂಬುದನ್ನು ಕಾಂಗ್ರೆಸ್​ ಹೇಳಲಿ. ಅಭಿವೃದ್ಧಿ ಕೆಲಸ ಮಾಡದೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ. ರಾಜ್ಯಪಾಲರ ಬಾಯಲ್ಲಿ ಸುಳ್ಳನ್ನು ಹೇಳಿಸಿದೆ ಈ ಸರ್ಕಾರ” ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಕರ್ನಾಟಕ ಮಾದರಿ ಭ್ರಷ್ಟಾಚಾರ: ಅಶ್ವತ್ಥನಾರಾಯಣ

“ಕರ್ನಾಟಕಕ್ಕೆ ಇದ್ದ ಒಳ್ಳೆಯ ಹೆಸರನ್ನು ಈ ಸರ್ಕಾರ ಕೆಡಿಸಿದೆ. ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಟ್ಟ ಮಾಡೆಲ್ ಆಗಿದೆ. ಭ್ರಷ್ಟಾಚಾರ ಮಾದರಿಯಾಗಿದೆ. ಕರ್ನಾಟಕ ಮಾದರಿ ಅಂದರೆ ಅಪಕೀರ್ತಿ ಮಾಡೆಲ್ ಆಗಿದೆ” ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಡಾ. ಅಶ್ವತ್ಥ​ನಾರಾಯಣ ಹರಿಹಾಯ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments