ಕೋಲಾರ: ಬದುಕಿನ ತುಂಬೆಲ್ಲಾ ಹೋರಾಟ ಜಂಜಾಟಗಳನ್ನೇ ಕಾಣುವ ಮನುಷ್ಯನಿಗೆ ಕೊನೆಗೆ ತಲುಪಲೇಬೇಕಿರುವ ಸ್ಥಳ ಮುಕ್ತಿಧಾಮ. ಆದರೀಗ ಕೋಲಾರದ ಮುಕ್ತಿಧಾಮ ಪುಂಡ ಪೋಕರಿಗಳ ಹಾಗೂ ಮದ್ಯವೆಸನಿಗಳ ಅಡ್ಡೆಯಾಗಿದೆ.
ನಗರದ ಗಲ್ಫೇಟೆ ಪೋಲೀಸು ಠಾಣೆಯ ವ್ಯಾಪ್ತಿಗೆ ಬರುವ ರಹಮತ್ ನಗರಕ್ಕೆ ಹೊಂದಿಕೊಂಡಿರುವ ಈ ಹಿಂದೂ ರುದ್ರಭೂಮಿ ಹೆಸರಿಗಷ್ಟೇ ಸ್ಮಶಾನ ಎಂದು ಕರೆಯಿಸಿಕೊಂಡಿದೆ. ಆದರೆ ಊರಿನ ಕಸವೆಲ್ಲ ಈ ಸ್ಮಶಾನದಲ್ಲೇ ಬಿದ್ದಂತೆ ಭಾಸವಾಗುತ್ತದೆ.
ಒಂದಷ್ಚು ಕಟ್ಟುಪಾಡಾಗಲೀ ಕಾಂಪೌಂಡಿನ ಗೋಡೆಯಾಗಲೀ ಕಸ ಸುರಿಯಬಾರದೆಂಬ ನಿಯಮಗಳೇನೂ ಇಲ್ಲಿ ಇಲ್ಲ. ಕೊನೆಗೆ ಊರ ಕಸವೆಲ್ಲಾ ತಂದು ಸುರಿದರೂ ಯಾಕೆ ಎಂದು ಕೇಳುವವರು ಇಲ್ಲ.
ದುರಂತವೆಂದರೆ ಹಿರಿಯರ ನೆನಪಿಗಾಗಿ ವರ್ಷಕ್ಕೊಮ್ಮೆ ಸ್ಮಶಾನದತ್ತ ಮುಖ ಮಾಡುವ ಮಂದಿಗೆ ಸಮಾಧಿಗಳನ್ನೇ ಹುಡುಕಬೇಕಾದ ಸ್ಥಿತಿ ಈ ಹಿಂದೂ ರುದ್ರಭೂಮಿಯಲ್ಲಿ ನಿರ್ಮಾಣವಾಗಿದೆ.
ಇತ್ತೀಚೆಗಷ್ಟೇ ಒಂದೆಡು ಕುಟುಂಬಗಳು ತಮ್ಮ ಹಿರಿಯರ ಸಮಾಧಿಗಳಿಗೆ ವರ್ಷದ ಪೂಜೆ ಸಲ್ಲಿಸಲೆಂದು ಹೋಗಿ ಆ ರುದ್ರ ಭೂಮಿಯ ನೈಜ ಸ್ಥಿತಿಯನ್ನ ಕಣ್ಣಾರೆ ಕಂಡು ಮುಮ್ಮಲ ಮರಗಿದ್ದಾರೆ. ಮುಂದುವರೆದು ಆ ಕುಟುಂಬಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ರುದ್ರಭೂಮಿಗೆ ಕಾಂಪೌಂಡಿನ ವ್ಯವಸ್ಥೆ ಮಾಡಿ ಗೇಟು ಮಾಡಿಸಿ ಎಂದು ಕೋರಿದ್ದಾರೆ.
ಆದೇಶ, ಸುತ್ತೋಲೆ ಇಲ್ಲಿ ಕಸ!
ಯಾವುದೇ ಜಾತಿ ಜನಾಂಗಕ್ಕೆ ಮೀಸಲಿಟ್ಟ ಸ್ಥಳಗಳನ್ನು ಒತ್ತುವರಿ ಮಾಡುವುದಾಗಲೀ ಅಥವಾ ಅಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಸಬಾರದೆಂಬ ಆದೇಶ ಹಾಗೂ ಸುತ್ತೋಲೆಗಳು ಇದ್ದರೂ ಈ ಹಿಂದೂ ರುದ್ರ ಭೂಮಿ ಮಾತ್ರ ಅನಾಥವಾಗಿರುವುದು ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಇನ್ನಾದರೂ ಕೋಲಾರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸ್ಮಶಾನದಲ್ಲಿ ಸೂಕ್ತ ಕೌಂಪೌಂಡ್ ನಿರ್ಮಿಸಿ, ಪರಿಸರ ಸ್ನೇಹಿ ಸ್ಮಶಾನ ನಿರ್ಮಿಸುತ್ತಾ ಎಂಬುದು ಕೋಲಾರ ಜನತೆಯ ಆಶಯವಾಗಿದೆ.
ವರದಿ: ಸಾಯಿನಾಥ ದರ್ಗಾ