Homeಕರ್ನಾಟಕಖೊಟ್ಟಿ ಗ್ಯಾರಂಟಿಗಳು ಸರಕಾರದ ಆತ್ಮಸಾಕ್ಷಿಗೆ ದೊಡ್ಡ ಸವಾಲೊಡ್ಡಿವೆ: ಎಚ್‌ ಡಿ ಕುಮಾರಸ್ವಾಮಿ

ಖೊಟ್ಟಿ ಗ್ಯಾರಂಟಿಗಳು ಸರಕಾರದ ಆತ್ಮಸಾಕ್ಷಿಗೆ ದೊಡ್ಡ ಸವಾಲೊಡ್ಡಿವೆ: ಎಚ್‌ ಡಿ ಕುಮಾರಸ್ವಾಮಿ

ಅನ್ನಕ್ಕಾಗಿ ಜೀವತೆತ್ತ ಕುಟುಂಬದ ಪ್ರಕರಣ ಕಾಂಗ್ರೆಸ್‌ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಈ ಯುವಕನ ಸಾವಿಗೆ ಕಾರಣ ಮತ್ತು ನೇರ ಹೊಣೆ ಈ ಸರ್ಕಾರ. ರಾಜ್ಯಕ್ಕೆ ಸಿದ್ದರಾಮಯ್ಯ ಅವರೇ ಸಮಜಾಯಿಷಿ ಕೊಡಬೇಕು ಹಾಗೂ ಶಾಂತವ್ವನಿಗೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, “ಟಿಕೆಟ್ ಇಲ್ಲದೆ ರೈಲಿನಿಂದ ಹೊರದಬ್ಬಿಸಿಕೊಂಡ ಈತ, ಧಾರವಾಡ ಆಳ್ನಾವರದಲ್ಲಿ ಹೆತ್ತಮ್ಮಗೆ ಅನ್ನ ಅರಸುತ್ತಾ, ದುಡಿಮೆ ಹುಡುಕುತ್ತಾ ಹೊರಟ. ಎಲ್ಲಿಯೂ ಅವಕಾಶ ಸಿಗದೆ ಕೈ ಚೆಲ್ಲಿ ನೇಣಿಗೆ ಕೊರಳು ಒಡ್ಡಿದ್ದಾನೆ. ಮೂರು ನಾಲ್ಕು ದಿನ ತಾಯಿ ಮಗ ಇಬ್ಬರೂ ಅನ್ನಕ್ಕಾಗಿ ಪರಿತಪಿಸಿದ್ದಾರೆ” ಎಂದಿದ್ದಾರೆ.

“ಹಳ್ಳ ಹಿಡಿದಿರುವ ನಿಮ್ಮ ಗ್ಯಾರಂಟಿಗಳನ್ನು ಸರಿದಾರಿಗೆ ತನ್ನಿ. ಅವುಗಳ ವೈಫಲ್ಯವನ್ನು ಪರಾಮರ್ಶೆ ಮಾಡಿ. ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದ್ದರೆ ಮೊದಲು ಈ ಕೆಲಸ ಮಾಡಿ” ಎಂದು ಒತ್ತಾಯಿಸಿದ್ದಾರೆ.

“ಅನ್ನಭಾಗ್ಯ, ಗೃಹಲಕ್ಷ್ಮೀ ಹೆಸರಿನಲ್ಲಿ ಲೋಕೋದ್ಧಾರ ಮಾಡಿದ್ದೇವೆ ಎಂದು ಸುಳ್ಳುಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ನಿಮ್ಮ ಲೊಳಲೊಟ್ಟೆ ಬಯಲಾಗಿದೆ. ನುಡಿದಂತೆ ನಡೆದಿದ್ದೇವೆ ಎಂದರೆ ಇದೇನಾ ಮುಖ್ಯಮಂತ್ರಿಗಳೇ” ಎಂದು ಪ್ರಶ್ನಿಸಿದ್ದಾರೆ.

“ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು” ಎಂದಿದ್ದಾರೆ.

“ಅಧಿಕಾರದ ಮದವೇರಿ ಮಂಪರು ಬಿದ್ದಿರುವ ನಿಮ್ಮ ಕಂಗಳು ಆ ನತದೃಷ್ಟನ ಪ್ರಾಣಾರ್ಪಣೆಯಿಂದಲಾದರೂ ತೆರೆದುಕೊಳ್ಳಲಿ. ಇಲ್ಲವಾದರೆ, ಆ ಯುವಕನ ಸಾವಿನ ಶಾಪ ನಿಮಗೆ ತಟ್ಟದೇ ಬಿಡದು. ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ? ಇದ್ದರೆ ಈ ಧಾರುಣಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತಾ” ಎಂದು ಪ್ರಶ್ನಿಸಿದ್ದಾರೆ.

“ಗ್ಯಾರಂಟಿಗಳ ಮೂಲಕವೇ ಗತಿಗೆಟ್ಟ ಕಾಂಗ್ರೆಸ್‌ ಪಕ್ಷದ ಹೊಟ್ಟೆ ಹೊರೆಯುತ್ತಿರುವ ಮತಿಗೆಟ್ಟ ನಿಮ್ಮ ಸರಕಾರವು ಕಲ್ಯಾಣ ಕಾರ್ಯಕ್ರಮಗಳ ಕಪಟ ಪೋಷಾಕಿನಿಂದ ಮೆರೆಯುತ್ತಿದೆ. ಆ ಪೋಷಾಕು, ನಿಮ್ಮ ಢೋಂಗಿಧೀರತ್ವದ ಮುಖವಾಡ ಕಳಚಿ ನೆಲಕ್ಕೆ ಬಿದ್ದಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ” ಎಂದು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments