ಅಚ್ಚುಮೊಳೆಯಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವರೆಗೂ ಪತ್ರಿಕಾ ವೃತ್ತಿ ತಾಂತ್ರಿಕವಾಗಿ ಬಹಳ ಬದಲಾವಣೆ ಕಂಡಿದ್ದರೂ ಮೂಲ ಆಶಯ ಮತ್ತು ಬದ್ದತೆ ಮಾತ್ರ ಬದಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘ ದಾವಣಗೆರೆಯಲ್ಲಿ ಆಯೋಜಿಸಿದ್ದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ‘ಸರ್ಕಾರ ಮತ್ತು ಮಾಧ್ಯಮ’ ಕುರಿತ ಸಂವಾದ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
“ನಾನು ಮೊದಲು ಪತ್ರಕರ್ತ. ಬಳಿಕ ಸರ್ಕಾರದ ಪ್ರತಿನಿಧಿ. ರಾಜ್ಯದ ಎಲ್ಲ ಪತ್ರಕರ್ತ ಸಮುದಾಯದ ಪ್ರತಿನಿಧಿಯಾಗಿ ನಾನು ಸರ್ಕಾರದ ಪ್ರತಿನಿಧಿಯಾಗಿದ್ದೀನಿ” ಎಂದರು.
“ಈಗ ಅಧಿಕಾರಸ್ಥರ ಮತ್ತು ಪತ್ರಕರ್ತರ ನಡುವೆ ಸಂಪರ್ಕ ಅನಿವಾರ್ಯ ಅನ್ನುವ ಸ್ಥಿತಿ ಬಂದಿದೆ. ಮೊದಲೆಲ್ಲಾ ಪತ್ರಕರ್ತರು ಅಧಿಕಾರಸ್ಥರ ಜತೆ ನಿಕಟ ಸಂಪರ್ಕ ಹೊಂದುವುದಕ್ಕೆ ಬಹಳ ಮುಜುಗರ ಅನುಭವಿಸುತ್ತಿದ್ದರು” ಎಂದು ವಿವರಿಸಿದರು.
“ಜಾಹಿರಾತು ತರುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿ ಆಗಿಬಿಟ್ಟಿದೆ. ತನಿಖಾ ಪತ್ರಿಕೋದ್ಯಮ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಹೊಣೆ ಹಿಂದಕ್ಕೆ ಸರಿದಿದೆ. ಸ್ವಾತಂತ್ರ್ಯ ನಂತರದ ಭಾರತೀಯ ಪತ್ರಿಕೋದ್ಯಮ ಅಭಿವೃದ್ಧಿ ಮತ್ತು ಜನಮುಖಿ ಪತ್ರಿಕೋದ್ಯಮವನ್ನು ಪ್ರಥಮ ಆಧ್ಯತೆಯನ್ನಾಗಿಸಿಕೊಂಡಿತ್ತು. ಈಗ ಬದಲಾದ ಸನ್ನಿವೇಶದಲ್ಲಿ, ಜವಾಬ್ದಾರಿ ಮತ್ತು ಹೊಣೆಗಾರಿಕೆಗಳೂ ಬದಲಾಗುತ್ತಿವೆ” ಎಂದರು.
“ಪತ್ರಕರ್ತರು ಮೊದಲು ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯ, ಯೋಗಕ್ಷೇಮದ ಕಡೆಗೂ ಗಮನ ಹರಿಸಬೇಕು. ಕೆಲಸದ ಒತ್ತಡದ ನಡುವೆಯೂ ಈ ದಿಕ್ಕಿನಲ್ಲೂ ಗಮನ ಹರಿಸಿ” ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಮತ್ತು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪತ್ರಕರ್ತ ಸಮುದಾಯದ ವೃತ್ತಿಪರತೆ ಮತ್ತು ಪ್ರಗತಿಗೆ ನೀಡಿದ ನೆರವುಗಳನ್ನು ಪಟ್ಟಿ ಮಾಡಿದ ಕೆ.ವಿ.ಪ್ರಭಾಕರ್ ಅವರು, ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಪತ್ರಿಕಾ ವಿತರಕರನ್ನು ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು.
ವಿಶ್ವಾಸ ಮುಖ್ಯ
ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳದಿದ್ದರೆ ವೃತ್ತಿಯ ವಿಶ್ವಾಸಾರ್ಹತೆ ಉಳಿಯುವುದಿಲ್ಲ. ಬಾಲಿವುಡ್ ನಟಿ ಪೂನಂಪಾಂಡೆ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿ ಸಾವಿನ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿಬಿಟ್ಟರು. ಆದರೆ, ಪೂನಂ ಪಾಂಡೆ ಬದುಕೇ ಇದ್ದಾರೆ. ಸಾವಿನ ಸುದ್ದಿಯನ್ನಾದರೂ ಪ್ರಕಟಿಸುವ ಮೊದಲು ಪರಿಶೀಲಿಸಿಕೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು ಇಂತಹ ಪ್ರಕರಣಗಳಿಂದ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಉಳಿಯಲು ಸಾಧ್ಯವಿಲ್ಲ” ಎಂದರು.
“ಅಭಿವೃದ್ಧಿ ಪತ್ರಿಕೋದ್ಯಮ ಹಿಂದೆ ಸರಿದು ಊಹಾ-ಫೋಹ ಪತ್ರಿಕೋದ್ಯಮಕ್ಕೆ ಆಧ್ಯತೆ ನೀಡಿದ್ದರಿಂದಲೇ ಪೂನಂಪಾಂಡೆ ಥರದ ಘಟನೆಗಳು ಘಟಿಸಿ ಬಿಡುತ್ತವೆ” ಎಂದರು.
ಪ್ರತೀ ಪತ್ರಕರ್ತರ ಸಮ್ಮೇಳನಗಳಲ್ಲೂ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಆ ನಿರ್ಣಯಗಳಲ್ಲಿ ಎಲ್ಲವೂ ಜಾರಿ ಆಗುವುದೇ ಇಲ್ಲ. 38 ನೇ ರಾಜ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಸರ್ಕಾರದ ಎಲ್ಲಾ ನೆರವನ್ನು ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಸೇರಿ ಸಂಘದ ಹಲವು ಪದಾಧಿಕಾರಿಗಳು ವೇದಿಲೆಯಲ್ಲಿ ಉಪಸ್ಥಿತರಿದ್ದರು.