Homeಕರ್ನಾಟಕಕೇಂದ್ರ ಬಜೆಟ್‌ | ರಾಜ್ಯಕ್ಕೆ ಅನ್ಯಾಯವಾಗಿದ್ದು, ಇಷ್ಟೊಂದು ಕಳಪೆ ಬಜೆಟ್ ನೋಡಿರಲಿಲ್ಲ: ಡಿಸಿಎಂ ಡಿ ಕೆ...

ಕೇಂದ್ರ ಬಜೆಟ್‌ | ರಾಜ್ಯಕ್ಕೆ ಅನ್ಯಾಯವಾಗಿದ್ದು, ಇಷ್ಟೊಂದು ಕಳಪೆ ಬಜೆಟ್ ನೋಡಿರಲಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಇಷ್ಟೊಂದು ಕಳಪೆ ಬಜೆಟ್ ನಾನು ನೋಡಿರಲಿಲ್ಲ. ಚುನಾವಣಾ ಪೂರ್ವ ಬಜೆಟ್ ನಲ್ಲಿ ಜನರಿಗೆ ಏನು ನೀಡುತ್ತೇವೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದಾಗಿತ್ತು. ಈ ಬಜೆಟ್‌ ಬಹಳ ನಿರಾಸೆ ತಂದಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿ, “ನಮ್ಮ ರಾಜ್ಯದಿಂದ 26 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಈಗ 27ನೇಯವರೂ ಸೇರಿಕೊಂಡಿದ್ದಾರೆ. 27 ಸಂಸದರು ಸೇರಿ ನಮ್ಮ ರಾಜ್ಯಕ್ಕೆ ಏನು ತಂದಿದ್ದಾರೆ? ಈಗಲಾದರೂ 27 ಸಂಸದರು ಸಂಸತ್ತಿನ ಮುಂದೆ ಧರಣಿ ಮಾಡಲಿ” ಎಂದರು.

“ನಾನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಈ ಬಾರಿಯ ಬಜೆಟ್ ನಲ್ಲಿ ರಾಜ್ಯದ ಯೋಜನೆಗಳಿಗೆ ಆದ್ಯತೆ ನೀಡಬೇಕು, ನೀರಾವರಿ ಯೋಜನೆಗಳಿಗೆ ಈಗಾಗಲೇ ಘೋಷಣೆ ಮಾಡಿರುವ ಹಣ ಇನ್ನು ಬಿಡುಗಡೆಯಾಗಿಲ್ಲ. ಕರ್ನಾಟಕ ರಾಜ್ಯದಿಂದ ನೀವು ಆಯ್ಕೆಯಾಗಿದ್ದು, ರಾಜ್ಯದ ಯೋಜನೆಗಳು ಹಾಗೂ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದ್ದೆ” ಎಂದು ಹೇಳಿದರು.

“ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಪ್ರಧಾನಮಂತ್ರಿಗಳ ಭೇಟಿಗೆ ಕಾಲಾವಕಾಶ ಕೋರಿದ್ದೆ. ಕಳೆದ ಬಜೆಟ್ ಗಳಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5 ಸಾವಿರ ಕೋಟಿಯನ್ನು ಇನ್ನು ನೀಡಿಲ್ಲ. ಈ ಬಾರಿಯ ಬಜೆಟ್ ನಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ಯಾವ ರೀತಿಯ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ” ಎಂದರು.

ಡಿ ಕೆ ಸುರೇಶ್ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, “ನಾನು ಅಖಂಡ ಭಾರತದ ಪ್ರಜೆ. ಸುರೇಶ್ ಅವರು ಜನರ ಬೇಸರ ಹಾಗೂ ಅಭಿಪ್ರಾಯವನ್ನು ಹೇಳಿದ್ದಾರೆ ಅಷ್ಟೇ. ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ನಾವು ಒಗ್ಗಟ್ಟಾಗಿರಬೇಕು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಂದೇ. ಹಿಂದಿ ಭಾಗಕ್ಕೆ ಹೇಗೆ ಆದ್ಯತೆ ನೀಡಲಾಗುತ್ತಿದೆಯೋ ಅದೇ ರೀತಿ ನಮಗೂ ಆದ್ಯತೆ ನೀಡಬೇಕು”ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಬಗ್ಗೆ ಕೇಳಿದಾಗ, “ಇಂದು ಪ್ರಾಧಿಕಾರದ ಸಭೆ ಇದ್ದು ಈ ಸಭೆಗೇ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ನಮಗೆ ಈ ವಿಚಾರದಲ್ಲಿ ಸಹಕಾರ ನೀಡುವ ನಿರೀಕ್ಷೆ ಇದೆ” ಎಂದು ತಿಳಿಸಿದರು.

ಈ ಸರ್ಕಾರ ಮಾತ್ರವಲ್ಲ, ಮುಂದಿನ ಅವಧಿಯಲ್ಲೂ ಗ್ಯಾರಂಟಿ ಮುಂದುವರಿಕೆ

ಗ್ಯಾರಂಟಿ ಯೋಜನೆ ರದ್ದು ವಿಚಾರವಾಗಿ ಕೇಳಿದ ಪ್ರಶ್ನೆಗೆ, “ನಮ್ಮ ಗ್ಯಾರಂಟಿ ಯೋಜನೆಗಳು ಐದು ವರ್ಷಗಳ ಕಾಲ ಇರಲಿದೆ. ಇದು ನಮ್ಮ ಬದ್ಧತೆ. ಈ ಐದು ವರ್ಷಗಳ ನಂತರವೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗಲೂ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments