ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಎಸ್ಐಟಿ ತನಿಖೆಗೆ ಆಗ್ರಹಿಸಿ ಹಾವೇರಿ ಎಸ್ಪಿ ಕಚೇರಿ ಮುಂದೆ ಶನಿವಾರ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ಬದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, “ರಾಜ್ಯದಲ್ಲಿ ಜಂಗಲ್ ರಾಜ್ ಇದೆ, ತುಗಲಕ್ ದರ್ಬಾರ್ ಇದೆ. ತಾಲಿಬಾನ್ ಶಕ್ತಿಗಳು ತಲೆ ಎತ್ತುತ್ತಿವೆ ಅತ್ಯಾಚಾರ ಆದ ನಾಲ್ಕು ದಿನದ ಬಳಿಕ ಕೇಸ್ ಮಾಡಿದ್ದಾರೆ. ಹಾನಗಲ್ ಪೊಲೀಸರು ಕೇಸ್ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ದುಷ್ಟರ ಜೊತೆಗೆ ಪೊಲೀಸರು ಸೇರಿದ್ದಾರೆ. ನಾಚಿಕೆಯಾಗಬೇಕು ಇವರಿಗೆ” ಎಂದು ವಾಗ್ದಾಳಿ ನಡೆಸಿದರು.
“ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲಿಸರ ಮೂಲಕ ಸಂತ್ರಸ್ಥೆಗೆ ಆಮಿಷವೊಡ್ಡಿದ್ದರು. ಪಿಎಸ್ ಐ ಎಲ್ಲ ವ್ಯವಹಾರ ಮಾಡಿದ್ದು, ಪಿಎಸ್ ಐ ಅವರನ್ನು ಸಸ್ಪೆಂಡ್ ಮಾಡಲಿಲ್ಲ. ಅಮಾಯಕರನ್ನು ಬಂಧಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ನಂಬರ್ ತೋರಿಸುತ್ತಿದ್ದಾರೆ. ಅಲ್ಪ ಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಈಗ ಅಲ್ಪ ಸಂಖ್ಯಾತರ ರಕ್ಷಣೆ ಮಾಡಿ ನೋಡೊಣ” ಎಂದು ಸವಾಲು ಹಾಕಿದರು.
“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ನೈತಿಕ ಪೊಲೀಸ್ ಗಿರಿಗೆ ಅವಕಾಶ ಕೊಡುವುದಿಲ್ಲ ಅಂತ ಮುಖ್ಯಮಂತ್ರಿ ಹೇಳುತ್ತಾರೆ. ನೈತಿಕ ಪೊಲಿಸ್ ಗಿರಿ ತಡೆಯಲು ವಿಶೇಷ ಘಟಕ ಸ್ಥಾಪಿಸುವುದಾಗಿ ಹೇಳುತ್ತಾರೆ. ಎಲ್ಲಿದೆ ನಿಮ್ಮ ಸೆಲ್, ಸಿದ್ದರಾಮಯ್ಯ ನವರ ಸೆಲ್ ಡೌನ್ ಆಗಿದೆ. ಒಬ್ಬ ಹೆಣ್ಣುಮಗಳನ್ನ ರಕ್ಚಣೆ ಮಾಡಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತರನ್ನ ಏನು ರಕ್ಷಣೆ ಮಾಡುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪೊಲೀಸ್ ಸ್ಟೇಷನ್ ಸೆಟ್ಲಮೆಂಟ್ ಸೆಂಟರ್ ಆಗಿವೆ. ಪೊಲೀಸರು ಇದನ್ನು ಮುಚ್ಚಿ ಹಾಕಿದ್ದಾರೆ. ಸಂತ್ರಸ್ತೆ ಯ ಆರೋಗ್ಯ ತಪಾಸಣೆ ಮಾಡಲಿಲ್ಲ. ಸಿಎಂ ಗೆ ಮುಖಭಂಗವಾಗುತ್ತದೆ ಎಂದು ಸಂತ್ರಸ್ಥೆಯನ್ನು ಶಿರಸಿಗೆ ಶಿಪ್ಟ್ ಮಾಡಿದ್ದಾರೆ. ಸರಕಾರವೇ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಬೇಕು” ಎಂದು ಆಗ್ರಹಿಸಿದರು.
ವಿಪಕ್ಷ ನಾಯಕ ಆರ್ ಅಶೋಕ ಮಾತನಾಡಿ, “ಈ ಸರ್ಕಾರ ಬಂದ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಇವರೆಲ್ಲ ನಮ್ಮ ಬ್ರದರ್ ಸಿಸ್ಟರ್ ಅಂದರು. ಈಗ ಸಿಸ್ಟರ್ ರೇಪ್ ಆಗಿದೆ ಇಲ್ಲಿ. ಡಿ.ಕೆ.ಶಿವಕುಮಾರ್ ಅವರು ಮುಸಲ್ಮಾನರು ನಮ್ಮ ಬ್ರದರ್ಸ್, ಸಿಸ್ಟರ್ ಅಂದಿದ್ದರು. ಎಲ್ಲಪ್ಪ ನಿನ್ನ ಬ್ರದರ್ ಸಿಸ್ಟರ್ ಗಳು. ರಾಜ್ಯದಲ್ಲಿ ರೇಪ್ ಗಳು ದಿನನಿತ್ಯ ನಡೆಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 6 ತಿಂಗಳಲ್ಲಿ 7 ರೇಪ್ ಆಗಿದೆ. ಇದೆ ಗ್ಯಾಂಗ್ ರೇಪ್ ಮಾಡಿದೆಯಂತೆ” ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.