ಕೃತಕ ಬುದ್ಧಿಮತ್ತೆ (AI)ತಂತ್ರಜ್ಞಾನದ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ನಿಗಾ ಇಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ -24 ಕಾರ್ಯಕ್ರಮದಲ್ಲಿ ಮಾತನಾಡಿ, “ಕಳೆದ 3 ವರ್ಷಗಳಲ್ಲಿ 6 ಸಾವಿರಕ್ಕೂ ಹೆಚ್ಚು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಅಮಾನತು ಮಾಡಲಾಗಿದೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ಬೈಕ್ ಅಪಘಾತಗಳಿಂದ ಅತ್ಯಂತ ಹೆಚ್ಚು ಮರಣಗಳಾಗಿವೆ. ಆದ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು” ಎಂದು ಹೇಳಿದರು.
“ಈ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ನೀಡಲು ಹರೀಶ್ ಸಾಂತ್ವನ ಯೋಜನೆ ಜಾರಿಗೆ ತಂದಿತ್ತು. ಆದರೆ ಅಪಘಾತವಾಗಿ ಹೋದ ಜೀವ ಮತ್ತೆ ಮರಳಿ ತರಲು ಸಾಧ್ಯವೇ? ಫುತ್‌ಪಾತ್ ಮೇಲೆ ಗಾಡಿ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡಿ ವಾಹನ ಚಲಾಯಿಸುವುದರಿಂದ ಏನೂ ಪ್ರಯೋಜನವಿಲ್ಲ” ಎಂದರು.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ
“1.30 ಲಕ್ಷ ಕುಟುಂಬಗಳು ಬೆಂಗಳೂರಿನಲ್ಲಿ ವಾಸವಿದ್ದು, 55 ಲಕ್ಷಕ್ಕೂ ಅತಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಯುವ ಪೀಳಿಗೆ ಜವಾಬ್ದಾರಿ ಅರಿತು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸಾರಿಗೆ ಇಲಾಖೆ, ಬಿಬಿಎಂಪಿ, ಪೊಲೀಸ್ ಇಲಾಖೆಗಳು ಸೇರಿ ಸಂಚಾರ ದಟ್ಟಣೆ ನಿವಾರಣೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಚಾರ ದಟ್ಟಣೆ ನಿವಾರಣೆಗೆ ಇತರೇ ದೇಶಗಳಲ್ಲಿ ಇರುವ ಯೋಜನೆಗಳನ್ನು ಅಧ್ಯಯನ ಮಾಡಿ ಇಲ್ಲಿ ಅಳವಡಿಸುವ ಕೆಲಸ ಮಾಡಲಾಗುತ್ತಿದೆ” ಎಂದು ವಿವರಿಸಿದರು.
ಕೋರ್ಟ್ ಆದೇಶದಂತೆ ಫುಟ್ ಪಾತ್ ವ್ಯಾಪಾರಿಗಳ ತೆರವು
ಕಾರ್ಯಕ್ರಮದ ನಂತರ ಮಾಧ್ಯಮಗಳು ಜಯನಗರದಲ್ಲಿ ಬೀದಿ ವ್ಯಾಪಾರಿಗಳ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ಪಾದಚಾರಿಗಳ ಅನುಕೂಲ, ಸುಗಮ ಸಂಚಾರಕ್ಕಾಗಿ ಹೈಕೋರ್ಟ್ ಆದೇಶದಂತೆ ಫುಟ್ ಪಾತ್ ವ್ಯಾಪಾರಿಗಳ ತೆರವು ಮಾಡಲಾಗಿದೆ. ಪಾದಚಾರಿ ಮಾರ್ಗ ಇರುವುದು ಜನ ಓಡಾಡಲು. ಇಂತಹ ವ್ಯಾಪಾರಿಗಳು ನೋಂದಣಿ ಮಾಡಿಕೊಂಡು ರಸ್ತೆಯ ಒಂದು ಕಡೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಅವರಿಗೆ ಆರ್ಥಿಕ ನೆರವು ನೀಡಲು ನಾವು ಸಿದ್ಧ. ಆದರೆ ಪಾದಚಾರಿ ಮಾರ್ಗದಲ್ಲಿ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡಿದರೆ ಪಾದಚಾರಿಗಳು ಎಲ್ಲಿ ಓಡಾಡಬೇಕು” ಎಂದು ತಿಳಿಸಿದರು.