ಜ್ಞಾಪಕ ಶಕ್ತಿ ಇದೆ. ಆದರೆ, ಓಡಾಡಲು ಕಷ್ಟವಾಗುತ್ತದಿ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸ್ಪಷ್ಟಪಡಿಸಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ” ಇನ್ನೂ ಎರಡು ವರ್ಷಗಳ ಕಾಲ ರಾಜ್ಯಸಭಾ ಸದಸ್ಯ ಅವಧಿ ಇದೆ. ನನಗೆ 91 ವರ್ಷ ವಯಸ್ಸಾಗಿದೆ. ಆದರೂ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ” ಎಂದರು.
“ಲೋಕಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಗಾಳಿ ಸುದ್ದಿಗಳ ಬಗ್ಗೆ ನಾನು ಮಾತನಾಡಲ್ಲ. ಮೋದಿ ಅವರು ಏನಾದರೂ ಹೇಳಿದರೇ, ಅಗ ನಾವೆಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ವಿಚಾರ ಪ್ರಸ್ತಾಪಿಸಿದಾಗ, “ನನ್ನ ಮುಂದೆ ಚರ್ಚೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅವರು ಯಾವುದನ್ನೂ ಬಿಟ್ಟುಕೊಡುವುದಿಲ್ಲ. ಅವರ ಜೊತೆಗಿರುವ ಪೊಲೀಸರಿಗೂ ಗೊತ್ತಾಗಲ್ಲ” ಎಂದರು.
ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಥವಾ ಡಾ.ಮಂಜುನಾಥ್ ಯಾರು ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಪ್ರಜ್ವಲ್ಗೆ ಪ್ರಧಾನಿ ಮೋದಿ ಅವರು ಆಶೀರ್ವಾದ ಮಾಡಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರು ಕೂಡಾ ಆಶೀರ್ವಾದ ಮಾಡುತ್ತಾರೆ. ನಾನೂ ಆಶೀರ್ವಾದ ಮಾಡುತ್ತೇನೆ, ಜನರು ಆಶೀರ್ವಾದ ಮಾಡುತ್ತಾರೆ” ಎಂದರು.
ಸಿದ್ದರಾಮಯ್ಯ ರಾಮನ ದರ್ಶನಕ್ಕೆ ಹೋಗಲಿ
“ಸಿಎಂ ಸಿದ್ದರಾಮಯ್ಯ ಅವರು ಅಯೋಧ್ಯೆಗೆ ಜನವರಿ 22ರಂದು ಹೋಗುವುದಿಲ್ಲ ನಂತರ ಹೋಗುತ್ತೇನೆಂದು ಎಂದು ಹೇಳಿದ್ದಾರೆ. ಅವರ ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಮುಜರಾಯಿ ಇಲಾಖೆ ದೇವಾಲಯದಲ್ಲಿ ಪೂಜೆಗೆ ಸೂಚಿಸಿದೆ. ಸಾಫ್ಟ್ ಹಿಂದುತ್ವವೋ, ಹಾರ್ಡ್ ಹಿಂದುತ್ವವೋ ಒಟ್ಟಿನಲ್ಲಿ ಸಿದ್ದರಾಮಯ್ಯ ರಾಮನ ದರ್ಶನ ಮಾಡಿಕೊಂಡು ಬರಲಿ” ಎಂದರು.