Homeಕರ್ನಾಟಕಸಚಿವ ಸಂಪುಟ ಸಭೆ | 16ನೇ ಹಣಕಾಸು ಆಯೋಗ ಕುರಿತು ವಾದ ಮಂಡನೆಗೆ ಸಲಹಾ ಸಮಿತಿ...

ಸಚಿವ ಸಂಪುಟ ಸಭೆ | 16ನೇ ಹಣಕಾಸು ಆಯೋಗ ಕುರಿತು ವಾದ ಮಂಡನೆಗೆ ಸಲಹಾ ಸಮಿತಿ ರಚನೆ

16ನೇ ಹಣಕಾಸು ಆಯೋಗ ರಚಿಸಲು ಕೇಂದ್ರ ಅಧಿಸೂಚನೆ ಹೊರಡಿಸಿದೆ. ಈ ಹಿನ್ನಲೆ ಹಣಕಾಸು ಆಯೋಗದ ಮುಂದೆ ಸಮರ್ಥವಾಗಿ ವಾದ ಮಂಡಿಸಲು ಸಲಹಾ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ವಿಧಾನಸೌಧದಲ್ಲಿ ಸಂಪುಟ ಸಭೆ ನಂತರ ಮಾತನಾಡಿ, “4 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ, ಅದರಲ್ಲಿ ರಾಜ್ಯಕ್ಕೆ 60-70 ಸಾವಿರ ಕೋಟಿ ಮಾತ್ರ ಬರುತ್ತಿದೆ. ಒಂದು ವರ್ಷಕ್ಕೆ 14 ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಪಾಲು ಕುಂಟಿತ ಆಗಿದ್ದು, 5 ವರ್ಷದಲ್ಲಿ 62 ಸಾವಿರ ಕೋಟಿ ನಷ್ಟ ಉಂಟಾಗುತ್ತದೆ” ಎಂದು ಹೇಳಿದರು.

“ಕರ್ನಾಟಕದಿಂದ ಐಟಿ-ಬಿಟಿ ಸರ್ವಿಸ್​ನಿಂದಲೇ ಬರೊಬ್ಬರಿ 3.5 ಲಕ್ಷ ಕೋಟಿ ಡಾಲರ್ ವರಮಾನ ರಫ್ತಾಗುತ್ತಿದೆ. ಆದರೆ, ಈ ದೊಡ್ಡ ಪಾಲಿನಲ್ಲಿ ಸರ್ಕಾರಕ್ಕೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂಬುದು ನಮ್ಮ ವಾದ. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ತೆರಿಗೆಯಲ್ಲಿ ಶೇ.4.71ರಷ್ಟು ಕೊಡುತ್ತಿದ್ದರು. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇಕಡಾ 3.4ಕ್ಕೆ ಇಳಿಕೆಯಾಗಿದೆ. ಅಂದರೆ, 100 ರೂ.ನಲ್ಲಿ 12 ರೂ. ನಷ್ಟು ಮಾತ್ರ ನಮ್ಮ ರಾಜ್ಯಕ್ಕೆ ವಾಪಸ್ ಬರುತ್ತಿದೆ” ಎಂದು ವಿವರಿಸಿದರು.

15 ನೇ ಹಣಕಾಸು ಆಯೋಗದ ಶಿಫಾರಸು

ಪ್ರತಿ ವರ್ಷ ಶೇ.30 ಪ್ರತಿಶತ ರಾಜ್ಯಕ್ಕೆ ಬರಬೇಕಾದ ಪಾಲು ಕಡಿತ ಆಗುತ್ತಿದೆ. ತೆರಿಗೆ ಎನ್ನುವ ಬದಲು ಸೆಸ್, ಕರ ಎಂದು ಹೆಸರು ಬದಲಾಯಿಸಿ ಸಂಗ್ರಹ ಮಾಡಲಾಗುತ್ತಿದೆ. ಹಾಲಿ ಬಿಜೆಪಿ ಸರ್ಕಾರ ಬರುವ ಮೊದಲು ಸೆಸ್ ರ್ಚಾರ್ಜ್ 8 ರಿಂದ 9 ಪ್ರತಿಶತ ಇರುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ 23% ಸೆಸ್ ರ್ಚಾರ್ಜ್ ಆಗಿದೆ. 5 ರಿಂದ 6 ಲಕ್ಷ ಕೋಟಿ ಸೆಸ್ ರ್ಚಾರ್ಜ್ ಮೂಲಕ ಕೇಂದ್ರ ಆದಾಯ ಮಾಡುತ್ತಿದೆ. ಇದರಿಂದ ರಾಜ್ಯಕ್ಕೆ ನಮಗೆ ಸಿಗುವ ಪ್ರಮಾಣ ಕಡಿಮೆ ಆಗುತ್ತಿದೆ. ಜನರಿಗೆ ಇದರಿಂದೇನೂ ಹೊರೆ ಕಡಿಮೆ ಆಗುತ್ತಿಲ್ಲ. ಕರ್ನಾಟಕ ಒಂದು ರಾಜ್ಯಕ್ಕೆ 8200 ಕೋಟಿ ರೂ. ಸೆಸ್​ನಿಂದಲೇ ನಷ್ಟ ಆಗುತ್ತಿದ್ದು, ತೆರಿಗೆಯನ್ನು ಕರವಾಗಿ ಪರಿವರ್ತನೆ ಮಾಡಿ ರಾಜ್ಯದ ಆದಾಯ ಖೋತಾ ಮಾಡಲಾಗಿದೆ ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.

ಸಲಹಾ ಸಮಿತಿಯಲ್ಲಿ ಯಾರು ಇರಲಿದ್ದಾರೆ

“ರಚನೆ ಮಾಡುವ ಸಲಹಾ ಸಮಿತಿಯಲ್ಲಿ ಹಣಕಾಸು ತಜ್ಞರಾದ ಗೋವಿಂದ ರಾವ್, ಶ್ರೀನಿವಾಸ್ ಮೂರ್ತಿ ಮತ್ತು ನರೇಂದ್ರ ಪಾಣಿ ಸೇರಿ ತಜ್ಞರ ಸಲಹಾ ಸಮಿತಿ ಮಾಡುತ್ತೇವೆ. ಹಣಕಾಸು ಆಯೋಗದ ಮುಂದೆ ಏನು ವಾದ ಮಾಡಬೇಕು ಎಂಬ ಬಗ್ಗೆ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ” ಎಂದರು.

33 ವಿಷಯ ಪರಿಶೀಲಿಸಿ ನಿರ್ಣಯ ಕೈಗೊಂಡಿದ್ದೇವೆ: ಹೆಚ್ ​ಕೆ ಪಾಟೀಲ್​

ಸಂಪುಟ ಸಭೆ ನಂತರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, “ಪುಟ ಸಭೆಯಲ್ಲಿ 14ನೇ ಹಣಕಾಸು ಆಯೋಗ ಹಾಗೂ 15ನೇ ಹಣಕಾಸು ಆಯೋಗದಿಂದ ಬಿಡುಗಡೆ ಆಗಬೇಕಿದ್ದ ಅನುದಾನದ ಬಗ್ಗೆ ಚರ್ಚೆಯಾಗಿದೆ. ನೈತಿಕ ಹಕ್ಕು ಪ್ರಕಾರ ಕರ್ನಾಟಕಕ್ಕೆ ಸಿಗಬೇಕಾಗಿದ್ದ ಆರ್ಥಿಕ ಸಹಾಯ ಸಿಗುತ್ತಿಲ್ಲ. 14 ಮತ್ತು 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆರ್ಥಿಕ ಆಘಾತವಾಗಿದೆ” ಎಂದರು.

ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಅನುಮೋದಿತ ಒಟ್ಟು 10 ಡಬಲ್ ಡೆಕ್ಕರ್ ಹವಾನಿಯಂತ್ರಿತ ಎಲೆಕ್ಟ್ರೀಕ್ ಬಸ್ಸುಗಳನ್ನು ಖರೀದಿಸುವ ಬದಲಾಗಿ ಒಟ್ಟು 10 ಡಬಲ್ ಡೆಕ್ಕರ್ ಹವಾನಿಯಂತ್ರಿತ ಎಲೆಕ್ಟ್ರೀಕ್ ಬಸ್ಸುಗಳನ್ನು ಆರ್ಥಿಕ ಪರಿಣಾಮದಲ್ಲಿ ತಿಳಿಸಿರುವಂತೆ ಮೊತ್ತವನ್ನು ಭರಿಸಿ, ಕೆ.ಟಿ.ಪಿ.ಪಿ ಕಾಯ್ದೆ ಮತ್ತು ನಿಯಮಗಳನ್ವಯ ಜಿ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು 2023-24ನೇ ಸಾಲಿನಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯ ಈ ಕೆಳಕಂಡ ಮೊತ್ತದ ಪಾವತಿಯಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ನಿಗಮ ಮೋಟಾರು ವಾಹನ ತೆರಿಗೆ ವಿನಾಯಿತಿ ಕೋರಿರುವ ಮೊತ್ತ (ರೂ.ಕೋಟಿ)
ಕ.ರಾ.ರ.ಸಾ.ನಿ 243.52
ಬೆಂ.ಮ.ಸಾ.ಸಂ 119.88
ವಾ.ಕ.ರ.ಸಾ.ಸಂ 103.91
ಕ.ಕ.ರ.ಸಾ.ನಿ 114.16
ಒಟ್ಟು 581.47

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ಮೊದಲನೇ ಅನುಸೂಚಿ ನಿಯಮ-15(1) ರನ್ವಯ ಕೇಂದ್ರ ಪುರಸ್ಕೃ “ಪ್ರಸಾದ್” ಯೋಜನೆಯಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನದ ಅಭಿವೃದ್ದಿ ಯೋಜನೆಯನ್ನು ರೂ.45.70 ಕೋಟಿಗಳ ಮೊತ್ತದಲ್ಲಿ ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮ (ಕೆ.ಟಿ.ಐ.ಎಲ್) ಸಂಸ್ಥೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments