Homeಕರ್ನಾಟಕಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಬಿಡುಗಡೆಗೆ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹ

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಬಿಡುಗಡೆಗೆ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹ

ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡರನ್ನು ಪೊಲೀಸರು ಬಂಧಿಸಿದ್ದನ್ನು ಕನ್ನಡ ಸಾಹಿತ್ಯ ಪರಿಷತ್‌ ಖಂಡಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, “ವಿನಾಕರಣ ಬಂಧನಕ್ಕೆ ಒಳ ಪಡಿಸಿರುವುದನ್ನು ಖಂಡಿಸುತ್ತೇನೆ. ಈ ಪ್ರತಿಭಟನೆಯು ವಾಣಿಜ್ಯೋದ್ಯಮ/ಬ್ಯಾಂಕ್/ಅಂಗಡಿಗಳು/ಮಾಲ್ ಗಳು /ಹೋಟಲ್ ಮೊದಲಾದ ಸಂಸ್ಥೆಗಳಲ್ಲಿ ನಾಮ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯೇ ಇರಬೇಕು ಎನ್ನುವ ರಾಜ್ಯ ಸರ್ಕಾರದ ನಿಯಮದ ಜಾರಿಗಾಗಿ ಅವರು ಒತ್ತಾಯಿಸಿದ್ದು ಕಾನೂನು ಸಮ್ಮತವೇ ಆಗಿದೆ” ಎಂದಿದ್ದಾರೆ.

“ಈ ಪ್ರತಿಭಟನೆಯ ಕುರಿತು ಟಿ ಎ ನಾರಾಯಣ ಗೌಡರು ಸಾಕಷ್ಟು ಮುಂಚೆಯೇ ಸಾಮಾಜಿಕ ಜಾಲತಾಣ ಕರಪತ್ರ, ಜಾಹಿರಾತುಗಳ ಮೂಲಕ ಪ್ರಕಟಣೆ ನೀಡಿದ್ದರು. ಹೀಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಪ್ರತಿಭಟನೆಯ ಅನಿವಾರ್ಯತೆಗೆ ಸಿಲುಕಿಸಿ ಈಗ ಬಂಧನಕ್ಕೆ ಕಾರಣವಾಗಿರುವುದು ಕನ್ನಡ ನಾಮ ಫಲಕಗಳನ್ನು ಹಾಕದೆ ಇದ್ದರೂ ನಡೆಯುತ್ತದೆ ಎನ್ನುವ ಪರಭಾಷಿಕರ ಉಡಾಫೆ ಧೋರಣೆಯನ್ನು ಬೆಂಬಲಿಸಿದಂತಾಗಿದೆ” ಎಂದಿದ್ದಾರೆ.

“ರಾಜ್ಯ ಸರ್ಕಾರವು ಮತ್ತು ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಕಾರರ ವಿಷಯದಲ್ಲಿ ಸಂವೇದನಾಶೀಲವಾಗಿ ವರ್ತಿಸಬಹುದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಇಲ್ಲವೆ ಕರ್ನಾಟಕ ರಾಜ್ಯ ವಾಣಿಜ್ಯ ಮಹಾಮಂಡಳಿಯ ನೇತೃತ್ವದಲ್ಲಿ ದುಂಡು ಮೇಜಿನ ಸಭೆಯನ್ನು ಮೊದಲೇ ನಡೆಸಿದ್ದರೆ ಕ.ರ.ವೇ ಪ್ರತಿಭಟನೆಯು ನಡೆಯುತ್ತಲೇ ಇರಲಿಲ್ಲ” ಎಂದು ಹೇಳಿದ್ದಾರೆ.

“ಕನ್ನಡಿಗರ ಆಕ್ರೋಶವು ಕಟ್ಟೆಯೊಡೆಯುವ ಮುನ್ನ ಸರ್ಕಾರವು ಟಿ.ಎ.ನಾರಾಯಣ ಗೌಡರನ್ನು ಮತ್ತು ಬಂಧಿತ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸಹ ವಾಣಿಜ್ಯೋಧ್ಯಮ ನಾಮ ಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಗ ಬೇಕು ಎನ್ನುವ ಅಭಿಯಾನವನ್ನು ಬೆಂಬಲಿಸುವದರ ಜೊತೆಗೆ ಮುಂದಿನ ದಿನಗಳಲ್ಲಿ ಕನ್ನಡ ಬರಹಗಾರರು, ಎಲ್ಲಾ ಕನ್ನಡ ಸಂಘ ಸಂಸ್ಥೆಗಳು, ಹೋರಾಟಗಾರರು, ಚಲನಚಿತ್ರ ಕಲಾವಿದರು ಸಂಘಟನೆಗಳು ಹಾಗೂ ಎಲ್ಲಾ ಕನ್ನಡಿಗರನ್ನೂ ಸೇರಿಸಿಕೊಂಡು ಪ್ರತಿಭಟನೆಯ ನೇತೃತ್ವ ವಹಿಸಲಿದೆ” ಎಂದು ಮಹೇಶ ಜೋಶಿ ಎಚ್ಚರಿಸಿದ್ದಾರೆ.

ರಾಜ್ಯಪಾಲರಿಗೆ ಪತ್ರ

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಕೂಡ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರಿಗೆ ಪತ್ರ ಬರೆದಿದ್ದು, “ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಬೃಹತ್ ಹೋರಾಟದ ಪರಿಣಾಮವಾಗಿ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರನ್ನು ಬಂದಿಸಿದ್ದು. ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಸರ್ಕಾರದ ಈ ನಡೆಯನ್ನು ಖಂಡಿಸುತ್ತದೆ. ಇಂತಹ ಕನ್ನಡ ಕಟ್ಟಾಳುಗಳು ನಾರಾಯಣ ಗೌಡರನ್ನು ಬಿಡುಗಡೆ ಮಾಡಬೇಕು ಮತ್ತು ಕನ್ನಡ ಪರ ಹೋರಾಟಗಾರರ ಮೇಲಿರುವ ಕೇಸುಗಳನ್ನು ವಜಾಗೊಳಿಸಬೇಕು” ಎಂದು ಮನವಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments