ನೆಹರೂ-ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಭಾರತದ ನಿರ್ಮಾತೃಗಳು. ಸಾಮಾಜಿಕ ನ್ಯಾಯ ಉಳಿದಿರುವುದು ಕಾಂಗ್ರೆಸ್ ನಿಂದ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಭಾರತ್ ಜೋಡೋ ಸಭಾಂಗಣದಲ್ಲಿ ಆಯೋಜಿಸಿದ್ದ 139 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದ ತುಂಬ ಸಾವಿರಾರು ಸಮಸ್ಯೆಗಳಿದ್ದವು. ಆ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಬಂದಿದ್ದು ಕಾಂಗ್ರೆಸ್. ಈಗಲೂ ಹಲವು ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ಹೋರಾಟದ ಮಾರ್ಗದಲ್ಲೇ ಅಧಿಕಾರಕ್ಕೆ ಬರುತ್ತದೆ. ಭಾರತ್ ಜೋಡೋ ನಂತರ ರಾಹುಲ್ ಗಾಂಧಿ ಅವರು ಮತ್ತೊಂದು ಸುತ್ತು ಪಾದಯಾತ್ರೆ ಹೊರಟಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ನೇತೃತ್ವ ವಹಿಸುತ್ತಾರೆ. ಪ್ರಧಾನಿ ಆಗುತ್ತಾರೆ” ಎಂದು ಭರವಸೆ ವ್ಯಕ್ತಪಡಿಸಿದರು.
“ಬಿಜೆಪಿ, ಜನ ಸಂಘ, RSS ಹಾಗೂ ಸಂಘ ಪರಿವಾರದ ಒಬ್ಬೇ ಒಬ್ಬರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಬ್ರಿಟಿಷರ ಅವಧಿಯಲ್ಲೇ RSS ಹುಟ್ಟಿತ್ತು. ಆದರೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಒಂದೇ ಒಂದು ದಿನವೂ ಇವರು ಭಾಗವಹಿಸಲಿಲ್ಲ. ಆದ್ದರಿಂದ ಬಿಜೆಪಿಯ ಡೋಂಗಿತನವನ್ನು ಅರ್ಥ ಮಾಡಿಕೊಂಡು ಜನರಿಗೆ ಮನವರಿಕೆ ಮಾಡಿಸಬೇಕು” ಎಂದರು.
“ಹಿಂದೂ ಬೇರೆ-ಹಿಂದುತ್ವವೇ ಬೇರೆ. ನಾವು ರಾಮನನ್ನು ಪೂಜಿಸಲ್ವಾ, ನಮ್ಮೂರುಗಳಲ್ಲಿ ರಾಮಮಂದಿರ ಕಟ್ಟಿಲ್ವಾ, ರಾಮನ ಭಜನೆ ಮಾಡುವುದಿಲ್ವಾ. ಬಿಜೆಪಿಯವರದ್ದು ಡೋಂಗಿ ಹಿಂದುತ್ವ” ಎಂದು ಸಿಎಂ ವ್ಯಂಗ್ಯವಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅರಣ್ಯ ಸಚಿವ ಈಶ್ವರ್ ಖಂಡ್ರೆ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವೆ ರಾಣಿ ಸತೀಶ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.