ಬೆಂಗಳೂರು: ಕ್ರಿಕೆಟಿಗ ಕಾರಿಯಪ್ಪ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದ ಮಹಿಳೆಗೆ ಆರ್.ಟಿ. ನಗರ ಪೊಲೀಸರು ನೋಟಿಸ್ ನೀಡಿದ್ದಾರೆ.
ಘಟನೆ ಬಗ್ಗೆ ವಿವರ ನೀಡುವಂತೆ ಕಾರಿಯಪ್ಪ ಪ್ರೇಯಸಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈಕೆಯಿಂದ ಮಾಹಿತಿ ಪಡೆದ ಬಳಿಕ ಕ್ರಿಕೆಟಿಗ ಕಾರಿಯಪ್ಪಗೆ ನೋಟಿಸ್ ನೀಡಲು ಆರ್.ಟಿ. ನಗರ ಪೊಲೀಸರು ಮುಂದಾಗಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ಕ್ರಿಕೆಟಿಗ ಕಾರಿಯಪ್ಪ ಮತ್ತು ಮಹಿಳೆಗೆ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಅಲ್ಲದೇ ಪರಸ್ಪರರ ವಿರುದ್ಧ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ಆರ್.ಟಿ. ನಗರ ಪೊಲೀಸರು ತಿಳಿಸಿದ್ದಾರೆ.
2018ರಲ್ಲಿ ಮೊದಲ ಮದುವೆಯಾಗಿತ್ತು. ಕಾರಣಾಂತರಗಳಿಂದ 2020 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದೂವರೆ ವರ್ಷದ ಹಿಂದೆಯಷ್ಟೇ ಕಾರಿಯಪ್ಪ ಪರಿಚಯವಾಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದರು. ನಾನು ಗರ್ಭಿಣಿಯಾಗಿದ್ದೆ. ನಂತರ ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದರು. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ಮದುವೆಯಾಗುವುದಾಗಿ ಹೇಳಿದ್ದರಿಂದ ದೂರು ವಾಪಸ್ ಪಡೆದಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಕಾರಿಯಪ್ಪ ನನ್ನಿಂದ ಹಂತ ಹಂತವಾಗಿ 2 ಲಕ್ಷ ರೂ. ಹಣ ಪಡೆದಿದ್ದಾರೆ. ಇದುವರೆಗೂ ನನ್ನನ್ನು ಮದುವೆಯಾಗಿಲ್ಲ. ಕಾರಿಯಪ್ಪನ ತಂದೆ-ತಾಯಿಗೂ ನಾನು ಇಷ್ಟವಿಲ್ಲವೆಂದು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾರಿಯಪ್ಪ ಪ್ರತ್ಯೇಕ ದೂರು
ಒಂದೂವರೆ ವರ್ಷದ ಹಿಂದೆ ಮಹಿಳೆ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸುತ್ತಿದ್ದೆವು. ಹಲವೆಡೆ ಸುತ್ತಾಡಿದ್ದೇವೆ. ಆದರೆ ಮಹಿಳೆ ಮದ್ಯವ್ಯಸನಿಯಾಗಿದ್ದಾಳೆ. ಅವರ ನಡತೆ ಸರಿಯಿರಲಿಲ್ಲ. ಈ ಸಂಬಂಧ ಬುದ್ದಿ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಪ್ರೀತಿಗೆ ಬ್ರೇಕ್ ಹೇಳಿ ದೂರವಾಗಿದ್ದೆ. ನಂತರ ನನ್ನ ವಿರುದ್ಧ ಆಕೆ ಸುಳ್ಳು ಆರೋಪಗಳನ್ನು ಮಾಡಿ ದೂರು ನೀಡಿದ್ದಾಳೆ. ನನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆ. ನನ್ನ ಕ್ರಿಕೆಟ್ ಜೀವನ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಕಾರಿಯಪ್ಪ ದೂರು ನೀಡಿದ್ದಾರೆ. ಅಲ್ಲದೇ ಮಹಿಳೆಗೆ ಸಂಬಂಧಿಸಿದ ಕೆಲ ವಿಡಿಯೋಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.