ಬೆಳಗಾವಿ: ರಾಜ್ಯದಲ್ಲಿ ಸಾಧ್ಯವಾದಷ್ಟುಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಗೆ ಮಾಹಿತಿ ನೀಡಿದರು.
ತಿಪಟೂರಿನ ಶಾಸಕ ಷಡಕ್ಷರಿ.ಕೆ ಕೇಳಿದ ಪ್ರಶ್ನೆಗೆ ಸಚಿವರು ಬುಧವಾರ ಉತ್ತರಿಸಿದರು. “ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 376 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, 274 ಕೇಂದ್ರಗಳಿಗೆ ಸ್ವಂತಕಟ್ಟಡಗಳಿವೆ. 62 ಬಾಡಿಗೆ ಕಟ್ಟಡಗಳಲ್ಲಿವೆ. 22 ಶಾಲಾ ಆವರಣಗಳಲ್ಲಿ ನಡೆಯುತ್ತಿವೆ. 8 ಸಮುದಾಯಭವನಗಳಲ್ಲಿ ನಡೆಯುತ್ತಿವೆ. 3 ಪಂಚಾಯಿತಿ ಕಟ್ಟಡಗಳಲ್ಲಿ ನಡೆಯುತ್ತಿವೆ. 7 ಇತರ ಕಟ್ಟಡಗಳಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕಳೆದ 3 ವರ್ಷಗಳಲ್ಲಿ 364 ಲಕ್ಷ ರೂ. ಗಳನ್ನು ಒದಗಿಸಲಾಗಿದೆ” ಎಂದು ಸಚಿವರು ತಿಳಿಸಿದರು.
“ರಾಜ್ಯದಲ್ಲಿ 4 ಸಾವಿರ ಸರ್ಕಾರಿ ನಿವೇಶನಗಳಿಗೆ ಅಂಗನವಾಡಿ ಹೆಸರು ಹಾಕಿಸಲಾಗಿದೆ. ನಿವೇಶನ ಸಿಕ್ಕ ತಕ್ಷಣ ಅಗತ್ಯವಿರುವ ಎಲ್ಲ ಕಡೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಸಾರ್ವಜನಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿರುವ ಸೈಟ್ ಗಳನ್ನು ಅಂಗನವಾಡಿ ಕಟ್ಟಡಕ್ಕೆ ಬಳಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
ಬಾಲ್ಯವಿವಾಹ ಬೇರು ಸಮೇತ ಕಿತ್ತು ಹಾಕುತ್ತೇವೆ
ಬಾಲ್ಯವಿವಾಹ ಪದ್ಧತಿಯನ್ನು ಬೇರು ಸಮೇತ ಕಿತ್ತು ಹಾಕಲು ನಮ್ಮ ಇಲಾಖೆ ಸನ್ನದ್ಧವಾಗಿದೆ. ಬಾಲ್ಯವಿವಾಹ ಪ್ರಕರಣವನ್ನು ಮುಚ್ಚಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಈಗ ಕಾನೂನು ಹಿಂದಿನಂತಿಲ್ಲ. ಅತ್ಯಂತ ಪ್ರಬಲವಾದ ಕಾನೂನು ರಾಜ್ಯದಲ್ಲಿ ಜಾರಿ ಇದೆ. ಯಾವುದಾದರೂ ನಿರ್ಧಿಷ್ಟ ಪ್ರಕರಣದಲ್ಲಿ ಲೋಪ ಕಂಡುಬಂದಲ್ಲಿ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ, “ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ವಿವಿಧ ನಿಯಮಗಳ ಅಡಿಯಲ್ಲಿ ಕೆಲಸಮಾಡಲಾಗುತ್ತಿದೆ. ಅನುಷ್ಠಾನದಲ್ಲಿರುವ ಕೆಲ ಕುಂದುಕೊರತೆಗಳನ್ನು ಸರ್ಕಾರ ಗಮನಿಸಿದೆ. ಅವುಗಳನ್ನು ಪರಿಹರಿಸಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಶಿಕ್ಷಣ ಇಲಾಖೆ, ಪೊಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಮತ್ತಿತರ ಸಂಬಂಧಿಸಿದ ಇಲಾಖೆಗಳಲ್ಲದೇ ರಾಜ್ಯ ಅಪರಾಧ ಜಾಗೃತಿ ದಳ ಹಾಗೂ ಬಾಲ್ಯ ವಿವಾಹ ನಿಷೇಧ ಕೋಶ ಇತ್ಯಾದಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಇವುಗಳ ಮೇಲುಸ್ತುವಾರಿ ಹಾಗೂ ದಾಖಲಾಗುವ ನಿರ್ಧಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಪೂರಕ ಪ್ರಶ್ನೆಗೆ ವಿವರಣೆ ನೀಡಿದರು.