ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ನನ್ನು ಸುದ್ದಿಗೋಷ್ಠಿ ನಡೆಸುವ ಮೊದಲೇ ಗುರುವಾರ ಚೌಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಘಾತದಲ್ಲಿ ಆಗಿದ್ದ ಗಾಯವನ್ನೇ ತನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರ ವಿರುದ್ಧ ಆರೋಪ ಮಾಡಿ, ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಮಣಿಕಂಠ ರಾಠೋಡ್ನ ಕಟ್ಟು ಕಥೆ ಬಯಲಾಗಿದೆ. ಅಪಘಾತವನ್ನೇ ಕೊಲೆ ಯತ್ನ ಎಂದು ಬಿಂಬಿಸಿದ್ದ ಮಣಿಕಂಠ ರಾಠೋಡನನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ತನ್ನ ಮೇಲೆ ಮಾಡಿದ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಗೂ ಮುನ್ನವೇ ಪೊಲೀಸರು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.
ಬೆಳಿಗ್ಗೆ 11ಕ್ಕೆ ಮಣಿಕಂಠ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಬೆಳಿಗ್ಗೆಯೇ ಪತ್ರಿಕಾ ಭವನಕ್ಕೆ ಬಂದು ಕುಳಿತಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಮಣಿಕಂಠ ತನ್ನ ಫ್ಲ್ಯಾಟ್ ಇರುವ ಹುಮನಾಬಾದ್ ರಿಂಗ್ ರಸ್ತೆಯ ಭಾರತ ಪ್ರೈಡ್ ಅಪಾರ್ಟ್ಮೆಂಟ್ಗೆ ಬರುವಂತೆ ವಾಟ್ಸ್ ಆ್ಯಪ್ ಧ್ವನಿ ಸಂದೇಶದ ಮೂಲಕ ಮನವಿ ಮಾಡಿದ್ದರು. ಅದರಂತೆ ಅಪಾರ್ಟ್ಮೆಂಟ್ ಬಳಿ ಮಾಧ್ಯಮ ಪ್ರತಿನಿಧಿಗಳು ತೆರಳಿದ್ದರು. ಅಲ್ಲಿಯೇ ಕಾಯುತ್ತಿದ್ದ ಪೊಲೀಸರು ಪತ್ರಕರ್ತರೊಂದಿಗೆ ಮಾತನಾಡಲೂ ಅವಕಾಶ ಕೊಡದೇ ಅಲ್ಲಿಂದ ವಶಕ್ಕೆ ಪಡೆದು ಕರೆದೊಯ್ದರು.
ಲಿಖಿತ ಹೇಳಿಕೆ ನೀಡಿರುವ ಮಣಿಕಂಠ, “ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ನಿಮಿತ್ತ ನಡೆದ ಕ್ರಿಕೆಟ್ ಪಂದ್ಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಟಾಸ್ ಹಾರಿಸಿ ಬ್ಯಾಟಿಂಗ್ ಮಾಡಿದ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದೆ. ಇದರಿಂದ ಮುಜುಗರಕ್ಕೆ ಒಳಗಾದ ಎಸ್ಪಿ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ” ಎಂದಿದ್ದಾರೆ.