ಕನ್ನಡ ಭಾಷೆ, ಜೈನ ಸಾಹಿತ್ಯ, ಭಾಷಾವಿಜ್ಞಾನ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಹಿರಿಯ ಲೇಖಕ, ಸಂಶೋಧಕ ಹಾಗೂ ವಿದ್ವಾಂಸರಾದ ಡಾ. ಹಂಪ ನಾಗರಾಜಯ್ಯ (ಹಂಪನಾ) ಅವರ ನೇತೃತ್ವದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗವು ಇಂದು ಬೆಂಗಳೂರಿನ ಸಚಿವರ ಗೃಹ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿತು.
ಕನ್ನಡ ಪುಸ್ತಕಗಳನ್ನು ಗ್ರಂಥಾಲಯಗಳ ಮೂಲಕ ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಮರಳಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕು ಸೇರಿದಂತೆ ಕನ್ನಡ ಪುಸ್ತಕೋದ್ಯಮ, ಬರಹಗಾರರು ಹಾಗೂ ಪ್ರಕಾಶಕರ ಹಿತದೃಷ್ಟಿಯಿಂದ ಹಲವು ಬೇಡಿಕೆಗಳನ್ನು ನಿಯೋಗವು ಸಚಿವರ ಮುಂದಿಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಂಪನಾ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಎಸ್. ಬಂಗಾರಪ್ಪ ಅವರು ತಮ್ಮ ಸಹಪಾಠಿಯಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಹಂಪನಾ ನೆನಪಿಸಿಕೊಂಡರು.
ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪಿಸಬೇಕು ಎಂಬ ನಿರ್ಧಾರವನ್ನು ಎಸ್. ಬಂಗಾರಪ್ಪ ಅವರು ತಮ್ಮ ನಿವಾಸದಲ್ಲಿಯೇ ಕೈಗೊಂಡಿದ್ದರು. ಕನ್ನಡದ ಮೇರು ಸಾಹಿತಿ ರಾಷ್ಟ್ರಕವಿ ಕುವೆಂಪು ಅವರಿಗೆ ಮೊದಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲು ಬಂಗಾರಪ್ಪ ಅವರು ಸ್ವತಃ ಕುವೆಂಪು ಅವರ ಮನೆಗೆ ತೆರಳಿದ್ದರು. ಆ ಐತಿಹಾಸಿಕ ಕ್ಷಣಕ್ಕೆ ತಾವು ಸಾಕ್ಷಿಯಾಗಿದ್ದೆ ಎಂದು ಹಂಪನಾ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಸಪ್ನಾ ಬುಕ್ ಹೌಸ್ ನ ನಿತಿನ್, ಲೇಖಕ ಗುರುಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


