Homeಕರ್ನಾಟಕ‘ಬಸವ ಮಂಟಪ’ ಕೃತಿ ವಿವಾದ | ಕಾನೂನು ಕ್ರಮಕ್ಕೆ ಸಿಎಂ ಜತೆ ಚರ್ಚೆ: ಸಚಿವ ಎಂ.ಬಿ....

‘ಬಸವ ಮಂಟಪ’ ಕೃತಿ ವಿವಾದ | ಕಾನೂನು ಕ್ರಮಕ್ಕೆ ಸಿಎಂ ಜತೆ ಚರ್ಚೆ: ಸಚಿವ ಎಂ.ಬಿ. ಪಾಟೀಲ

ಬಸವಣ್ಣನವರ ವಿಚಾರಧಾರೆ, ತತ್ವಾದರ್ಶಗಳಿಗೆ ಅಪಚಾರ ಮಾಡಲಾಗಿದೆ ಎಂದು ಆರೋಪಿಸಿ ರವಿ ಹಂಜ್ ವಿರಚಿತ ‘ಬಸವ ಮಂಟಪ’ ಕೃತಿ ವಿರುದ್ಧ ಬಸವ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ, ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಆಗ್ರಹಿಸಿದ್ದಾರೆ.

ಗುರುವಾರ ಬಸವ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಶೋಧನೆಯ ಹೆಸರಿನಲ್ಲಿ ಲಿಂಗಾಯತ ಸಮುದಾಯ ಹಾಗೂ ಬಸವಾಭಿಮಾನಿಗಳ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ಬಸವಣ್ಣನವರನ್ನು ಅವಹೇಳನ ಮಾಡುವ ರೀತಿಯಲ್ಲಿ ಕೃತಿಯಲ್ಲಿ ಬರೆಯಲಾಗಿದೆ. ಇದರ ಹಿಂದೆ ಸೈದ್ಧಾಂತಿಕ ಷಡ್ಯಂತ್ರವಿದ್ದು, ಸಮಾಜದ ಶಾಂತಿ ಕದಡುವ ಇಂತಹ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಸವಣ್ಣನವರು ಸಮಾನತೆ, ಜಾತಿರಹಿತ ಸಮಾಜ, ಕಾಯಕ ತತ್ವ ಹಾಗೂ ಸಂಸತ್ತಿನ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ಅಂತಹವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ. ವಿರೋಧ ವ್ಯಕ್ತವಾದ ಬಳಿಕ ಲೇಖಕರು ಕ್ಷಮೆ ಕೇಳಿರುವುದು ಹಾಗೂ ತಿದ್ದುಪಡಿ ಮಾಡುವುದಾಗಿ ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

12ನೇ ಶತಮಾನದ ಐತಿಹಾಸಿಕ ಘಟನೆಗಳನ್ನು ಪೂರ್ವಗ್ರಹಪೀಡಿತರಾಗಿ ತಿರುಚುವ ಪ್ರಯತ್ನ ನಡೆಯುತ್ತಿದೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದ ಬಳಿಕ ಇಂತಹ ಬೆಳವಣಿಗೆಗಳು ಹೆಚ್ಚಾಗಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಬರೆಯಬಹುದು ಎಂಬ ಧೋರಣೆ ಸರಿಯಲ್ಲ. ನಾಡಿನ ಸಾಹಿತಿಗಳು, ಯುವಜನರು, ಮಠಾಧೀಶರು ಹಾಗೂ ಪ್ರಜ್ಞಾವಂತರು ಈ ಬೆಳವಣಿಗೆಯನ್ನು ಖಂಡಿಸಬೇಕು ಎಂದು ಕರೆ ನೀಡಿದರು.

ಆಳಂದ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಬಸವಣ್ಣ, ಗಾಂಧಿ ಹಾಗೂ ಅಂಬೇಡ್ಕರ್ ಅವರ ವಿಚಾರಗಳನ್ನು ಸಹಿಸದ ಮನಸ್ಥಿತಿ ಹಿಂದಿನಿಂದಲೂ ಇದೆ. ರವಿ ಹಂಜ್ ಅವರು ದುರುದ್ದೇಶದಿಂದ ಪುಸ್ತಕ ಬರೆದಿದ್ದು, ಬಸವಣ್ಣನವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ಇದು ಮುಂದುವರಿದರೆ ಸಮಾಜದ ಶಾಂತಿಗೆ ಭಂಗ ಉಂಟಾಗಬಹುದು. ಬಸವಣ್ಣನವರ ವಚನಗಳು ಜಗತ್ತಿನ 143 ಭಾಷೆಗಳಿಗೆ ಅನುವಾದಗೊಂಡಿದ್ದು, ಅವರ ವಿಚಾರಧಾರೆಯನ್ನು ಕಾಪಾಡಲು ಹೋರಾಟ ಅನಿವಾರ್ಯವಾಗಿದೆ ಎಂದರು.

ಬ್ರಿಟನ್‌ನಲ್ಲಿರುವ ಕನ್ನಡಿಗ ನೀರಜ್ ಪಾಟೀಲ್ ಹಾಗೂ ಚಿಂತಕ ಜೆ.ಎಸ್. ಪಾಟೀಲ್ ಕೂಡ ಲೇಖಕ ಮತ್ತು ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಮೇಯರ್ ಗಂಗಾಂಬಿಕ ಮಲ್ಲಿಕಾರ್ಜುನ್, ಮಾಜಿ ಉಪ ಮೇಯರ್ ಪುಟ್ಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವ ಬಸವರಾಜ ರಾಯರಡ್ಡಿ ಭಾಗವಹಿಸಿದ್ದರು.

ಕಾನೂನು ಕ್ರಮಕ್ಕೆ ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ

ಬಸವಣ್ಣನವರು ಹಾಗೂ ಲಿಂಗಾಯತ ಸಮುದಾಯದ ವಿರುದ್ಧ ನಡೆಯುತ್ತಿರುವ ಅವಹೇಳನಕಾರಿ ಬೆಳವಣಿಗೆಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ. ಈ ವಿಚಾರವಾಗಿ ಸಚಿವರಾದ ಶರಣಪ್ರಕಾಶ್ ಪಾಟೀಲ ಸೇರಿದಂತೆ ಇತರರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ಲೇಖಕ ಮತ್ತು ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದರು.

ಬಸವ ಸಮಿತಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣ ಮತ್ತು ಶರಣ ಸಂಸ್ಕೃತಿಗೆ ಅಪಚಾರ ಮಾಡುವ ಪ್ರಯತ್ನದ ಹಿಂದೆ ಷಡ್ಯಂತ್ರವಿದೆ. ಈ ಬೆಳವಣಿಗೆಗಳ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಮಹಾರಾಷ್ಟ್ರದಲ್ಲಿಯೂ ವಿರೋಧ ವ್ಯಕ್ತವಾಗಿದೆ. ಸಿರಿಗೆರೆ, ಭಾಲ್ಕಿ, ಗದಗ, ಸುತ್ತೂರು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಕೂಡ ಈ ವಿಚಾರದಲ್ಲಿ ಧ್ವನಿ ಎತ್ತಲಿದ್ದಾರೆ ಎಂದರು.

ಬಸವಣ್ಣನವರು ಲಿಂಗಾಯತ ಸಮುದಾಯದ ಅಸ್ಮಿತೆ ಮಾತ್ರವಲ್ಲ, ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಮಹಾನ್ ವ್ಯಕ್ತಿ. ಅವರ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಬಸವಣ್ಣನವರ ವಿಚಾರಧಾರೆಗೆ ಧಕ್ಕೆ ತರುವ ಪ್ರಯತ್ನಗಳನ್ನು ಖಂಡಿಸಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಬಸವಣ್ಣನವರ ಕುರಿತು ನೀಡಿರುವ ಹೇಳಿಕೆಗಳು ಮತ್ತು ಪ್ರಕಟಿಸಿರುವ ಕೃತಿಯಿಂದ ಬಸವಾಭಿಮಾನಿಗಳಿಗೆ ತೀವ್ರ ಆಘಾತವಾಗಿದೆ. ಈ ವಿಚಾರದಲ್ಲಿ ಸಮುದಾಯ ಒಗ್ಗಟ್ಟಿನಿಂದ ನಿಲ್ಲಲಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments