Homeಕರ್ನಾಟಕಜೆಜೆಎಂ ಕಾಮಗಾರಿ ವಿಳಂಬ: ಗುತ್ತಿಗೆ ಸಂಸ್ಥೆಗೆ ಅಂತಿಮ ನೋಟಿಸ್ ನೀಡಲು ಖಂಡ್ರೆ ಸೂಚನೆ

ಜೆಜೆಎಂ ಕಾಮಗಾರಿ ವಿಳಂಬ: ಗುತ್ತಿಗೆ ಸಂಸ್ಥೆಗೆ ಅಂತಿಮ ನೋಟಿಸ್ ನೀಡಲು ಖಂಡ್ರೆ ಸೂಚನೆ

ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯ 388 ಗ್ರಾಮೀಣ ಜನವಸತಿಗಳಿಗೆ ಹಾಗೂ ಕಲಘಟಗಿ, ಸವದತ್ತಿಯ ಹಳ್ಳಿಗಳಿಗೆ ನೀರು ಪೂರೈಸುವ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಅನಗತ್ಯ ವಿಳಂಬ ಮಾಡಿರುವ ಎಲ್ ಅಂಡ್ ಟಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಜಲ ಜೀವನ ಮಿಷನ್ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ರೇಣುಕಾಸಾಗರ ಜಲಾಶಯದಿಂದ ಧಾರವಾಡ, ಬೆಳಗಾವಿ ಜಿಲ್ಲೆಯ ಗ್ರಾಮೀಣ ವಸತಿಗಳಿಗೆ ಹಾಗೂ ಕಲಘಟಗಿ ಪಟ್ಟಣಕ್ಕೆ ನೀರು ಪೂರೈಸುವ ಕಾಮಗಾರಿ ಗುತ್ತಿಗೆ ಪಡೆದಿರುವ ಮೆ.ಎಲ್ ಅಂಡ್ ಟಿ ಸಂಸ್ಥೆ, ಅಂತಿಮ ನೋಟಿಸ್ ನೀಡಿದ ಹೊರತಾಗಿಯೂ ನೀರಿನ ಕೊಳವೆ ಖರೀದಿಗೂ ಮುಂದಾಗಿಲ್ಲ, ಸಮರ್ಪಕವಾಗಿ ಕಾರ್ಮಿಕರನ್ನೂ ನಿಯೋಜಿಸುತ್ತಿಲ್ಲ, ಕಾಮಗಾರಿ ಮಂದ ಗತಿಯಲ್ಲಿ ನಡೆಯುತ್ತಿದೆ. ಪ್ರಗತಿಯ ವರದಿಯನ್ನೂ ಅವರು ನೀಡುತ್ತಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ತಾವೇ ಆಯುಕ್ತಾಲಯದಲ್ಲಿ ಸೆಪ್ಟೆಂಬರ್ 11ರಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಿ, ಬಾಕಿ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಬೇಕು ಮತ್ತು ವಾರದ ಆಧಾರದ ಪ್ರಗತಿಯನ್ನು ಸಲ್ಲಿಸಬೇಕು ಎಂದೂ ಸ್ಪಷ್ಟಪಡಿಸಿದ್ದರೂ ಈ ರೀತಿ ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಎಲ್ ಅಂಡ್ ಟಿ ಯನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚನೆ ನೀಡಿದರು.

ಬಹುಗ್ರಾಮ ಕುಡಿಯುವ ನೀರಿನ ಗುತ್ತಿಗೆ ಪಡೆದ ಹಲವು ಸಂಸ್ಥೆಗಳು ಕಾಮಗಾರಿ ವಿಳಂಬ ಮಾಡುತ್ತಿರುವ ತೀವ್ರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಕಾಮಗಾರಿ ವಿಳಂಬ ಮಾಡುತ್ತಿರುವ ಎಲ್ಲ ಸಂಸ್ಥೆಗಳಿಗೆ ಅಂತಿಮ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

ಅರಣ್ಯ ತಿರುವಳಿ ಅನುಮತಿ ಹೊರತಾಗಿ ಉಳಿದ ಯಾವುದೇ ಕಾಮಗಾರಿ ವಿಳಂಬವಾದರೆ ಸರ್ಕಾರ ಸಹಿಸುವುದಿಲ್ಲ. ಇದರಿಂದ ಯೋಜನೆಯ ಮುಖ್ಯ ಉದ್ದೇಶವೇ ವಿಫಲವಾಗುತ್ತದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕಾರ್ಯಗತವಾದರೆ ಈ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ಹೀಗಾಗಿ ಗುತ್ತಿಗೆ ಪಡೆದ ಸಂಸ್ಥೆಗಳು ಕಾಮಗಾರಿಗೆ ಮಾನವ ಸಂಪನ್ಮೂಲ ನಿಯೋಜನೆ ಮಾಡದಿದ್ದರೆ, ನೀರಿನ ಕೊಳವೆಗಳ ಖರೀದಿಗೆ ಬೇಡಿಕೆ ಸಲ್ಲಿಸದೇ ಇದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಿ ಎಂದು ಸೂಚಿಸಿದರು.

ಸಮರ್ಪಕ ವಿದ್ಯುತ್ ಗೆ ಪತ್ರ ಬರೆಯಲು ಸೂಚನೆ:
ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗದ ಕಾರಣ ಓವರ್ ಹೆಡ್ ಟ್ಯಾಂಕ್ ಗಳಿಗೆ ನೀರು ಎತ್ತಲು  ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪತ್ರ ಬರೆದು, ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆಯೂ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ಪ್ರಧಾನಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತರಾದ ಫೌಜಿಯಾ ತರನ್ನುಮ್ ಬಿ., ವೆಂಕಟರಾಜು, ಸಿಇಓ ರಾಹುಲ್ ಶಿಂಧೆ ಮತ್ತಿತರರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments