ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕೌಶಲ್ಯಾಭಿವೃದ್ಧಿ, ಕೃತಕ ಬುದ್ಧಿಮತ್ತೆ (AI), ಮಾಹಿತಿ ತಂತ್ರಜ್ಞಾನ ಮತ್ತು ತಾಂತ್ರಿಕ ಹಾಗೂ ಉದ್ಯೋಗಾಧಾರಿತ ಕೌಶಲಗಳ ತರಬೇತಿಗಾಗಿ ಒಂದು ಕೇಂದ್ರವನ್ನು ಸ್ಥಾಪಿಸುವ ಉದ್ದೇಶವಿದ್ದು, ಇದಕ್ಕಾಗಿ ಸಂಸ್ಥೆಗೆ ನಾಗರಿಕ ಸೌಲಭ್ಯದ ನಿವೇಶನ ಮಂಜೂರು ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
2026-27ನೇ ಸಾಲಿನ ಹೊಸ ವಿದ್ಯಾರ್ಥಿಗಳ ಪ್ರವೇಶ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಸ್ಥೆಗಾಗಿ ಉತ್ತಮವಾದ ಕೌಶಲ್ಯಾಭಿವೃದ್ಧಿ ಮತ್ತು ತಾಂತ್ರಿಕ ತರಬೇತಿ ಕೇಂದ್ರವನ್ನು ಸ್ಥಾಪಿಸುವುದನ್ನು ಜವಾಬ್ದಾರಿ ಎಂದು ಭಾವಿಸುತ್ತೇನೆ. ಹೀಗಾಗಿ ಕೈಗಾರಿಕಾ ಪ್ರದೇಶದಲ್ಲಿ ಸಿಎ ನಿವೇಶನ ನೀಡಲಾಗುವುದು ಎಂದು ಹೇಳಿದರು.
ಇಂದಿನ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿವೆ. ನಮ್ಮ ಮಕ್ಕಳು ಇವುಗಳ ಬಗ್ಗೆ ತಿಳಿದುಕೊಳ್ಳಬೇಕು. ಅವರಿಗೆ ಹೊಸ ತಂತ್ರಜ್ಞಾನಗಳ ಪರಿಚಯ ಮತ್ತು ತರಬೇತಿ ದೊರೆಯಬೇಕು. ಅದೇ ಸಮಯದಲ್ಲಿ ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನೂ ಮರೆಯಬಾರದು ಎಂದು ಪಾಟೀಲರು ಹೇಳಿದರು.
ಗುಬ್ಬಿ ತೋಟದಪ್ಪನವರು ಮಕ್ಕಳಿಲ್ಲದಿದ್ದರೂ ಇಡೀ ಸಮಾಜವನ್ನೇ ತಮ್ಮ ಕುಟುಂಬವೆಂದು ಭಾವಿಸಿ, ತಮ್ಮ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿದರು. ಗುಬ್ಬಿ ತೋಟದಪ್ಪನವರ ಬದುಕು ಮತ್ತು ನಮ್ಮ ಪೂರ್ವಜರಾದ ಶಿರಸಂಗಿ ಲಿಂಗರಾಜರ ಬದುಕಿನಲ್ಲಿ ಹಲವು ಸಾಮ್ಯತೆಗಳಿವೆ. ಅವರುಗಳ ಕೊಡುಗೆ ಇಲ್ಲದಿದ್ದರೆ ಇಂದು ಸಮುದಾಯದ ಹಲವರಿಗೆ ಶಿಕ್ಷಣದ ಅವಕಾಶವೇ ಸಿಗುತ್ತಿರಲಿಲ್ಲ ಎಂದರು.
ಮುಂದಿನ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಿ, ಪೂಜ್ಯರ ನೇತೃತ್ವದಲ್ಲಿ ‘ಶಿವಾನುಭವ’ ಪತ್ರಿಕೆಯ ಮರುಮುದ್ರಿತ ಸಂಚಿಕೆ ಮತ್ತು ಸಂಪುಟವನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಇದನ್ನು ಬಸವ ಜಯಂತಿಯ ಆಚರಣೆಯೊಂದಿಗೂ ಜೋಡಿಸುವ ಯೋಜನೆಯಿದೆ. ನಮ್ಮ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ ಸುಮಾರು 25 ಹಿರಿಯರ ಕುರಿತು ಪುಸ್ತಕವೊಂದನ್ನು ಹೊರತರುವ ಯೋಚನೆಯೂ ಇದೆ ಎಂದು ಹೇಳಿದರು.
ದೊಡ್ಡ ಪುಸ್ತಕಗಳನ್ನು ಓದಲು ಎಲ್ಲರಿಗೂ ಸಮಯ ಸಿಗುವುದಿಲ್ಲ. ಆದ್ದರಿಂದ ಸರಳ ಭಾಷೆಯಲ್ಲಿ, ಚಿಕ್ಕದಾದ ಅರ್ಥಪೂರ್ಣವಾದ ಪುಸ್ತಕಗಳನ್ನು ಪ್ರಕಟಿಸಿ ನಮ್ಮ ಇತಿಹಾಸವನ್ನು ಯುವಜನರಿಗೆ ಪರಿಚಯಿಸಬೇಕು ಎಂದು ಪಾಟೀಲರು ಅಭಿಪ್ರಾಯಪಟ್ಟರು.
ಸಮುದಾಯಕ್ಕಾಗಿ ಸೇವೆ ಸಲ್ಲಿಸಿದ ದಕ್ಷಿಣ ಕರ್ನಾಟಕದ ಮಹನೀಯರನ್ನು ಉತ್ತರ ಕರ್ನಾಟಕದ ಜನರಿಗೆ ಪರಿಚಯಿಸುವ, ಹಾಗೆಯೇ ಉತ್ತರ ಕರ್ನಾಟಕ ಮಹನೀಯರನ್ನು ದಕ್ಷಿಣ ಕರ್ನಾಟಕದ ಜನತೆಗೆ ಪರಿಚಯಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಸಚಿವರು ಸಿದ್ದಪ್ಪ ಕಂಬಳಿಯವರು, ರಾಜಾ ಲಕ್ಕಮಗೌಡರು, ಮಂಟನಾಳ ಶಿವಯೋಗಿಗಳು, ಭೂಮರೆಡ್ಡಿಯವರು ಸೇರಿದಂತೆ ಹಲವು ಹಿರಿಯರನ್ನು ಸ್ಮರಿಸಿದರು.
ಇಂತಹ ಹಾಸ್ಟೆಲ್ ನ ಸೌಲಭ್ಯದಿಂದ ಶಿಕ್ಷಣ ಪಡೆದು ಸ್ಥಾನಮಾನ ಪಡೆದವರು ಮುಂದೆ ಸಮುದಾಯ ಹಾಗೂ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆಯಬಾರದು ಎಂದರು.
ನಮ್ಮ ಸಮಾಜದ ಮಹನೀಯರು ಶಿಕ್ಷಣ, ಅನ್ನದಾಸೋಹ ಮತ್ತು ವಸತಿ ಸೌಲಭ್ಯಗಳ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದಾರೆ. ಸಿದ್ಧಗಂಗಾ ಮಠದ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ಆಶ್ರಯ ಮತ್ತು ಅನ್ನ ನೀಡುವ ಮೂಲಕ ಮಾಡಿದ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿ, ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರು ಸಾವಿರಾರು ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಇಂತಹ ಮಠಮಾನ್ಯಗಳು ಮತ್ತು ಮಹನೀಯರ ಸೇವಾಕಾರ್ಯವನ್ನು ನಾವು ಮುಂದುವರಿಸಬೇಕು ಎಂದು ಪಾಟೀಲ ನುಡಿದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಎಲ್.ರೇವಣ್ಣಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ.ನಾಗರಾಜ ಮೂರ್ತಿ, ಮಾಜಿ ಉಪ ಮೇಯರ್ ಬಿ.ಎಸ್. ಪುಟ್ಟರಾಜು. ಸಂಸ್ಥೆಯ ಗೌರವ ಧರ್ಮದರ್ಶಿಗಳು ಉಪಸ್ಥಿತರಿದ್ದರು.


