Homeಕರ್ನಾಟಕಬೆಂಗಳೂರಿನ ಕಳಂಕ ತೊಡೆದುಹಾಕಲು ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ

ಬೆಂಗಳೂರಿನ ಕಳಂಕ ತೊಡೆದುಹಾಕಲು ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ನೂತನ ಘನತ್ಯಾಜ್ಯ ನಿರ್ವಹಣೆ ಟೆಂಡರ್ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ತರುವ ಸಂಬಂಧ ಸಚಿವ ಕೃಷ್ಣ ಬೈರೇಗೌಡರವರ ಅಧ್ಯಕ್ಷತೆಯಲ್ಲಿ ಇಂದು ಪ್ರಮುಖ ಸಭೆ ನಡೆಯಿತು.

ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸ್ವಯಂಸೇವಾ ಸಂಸ್ಥೆಗಳ (ಎನ್.ಜಿ.ಓ) ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬೆಂಗಳೂರಿನ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಭೆಯ ಪ್ರಮುಖ ಮುಖ್ಯಾಂಶಗಳು ಹಾಗೂ ನಿರ್ದೇಶನಗಳು

ಹಂತ-ಹಂತವಾಗಿ 30 ಪ್ಯಾಕೇಜ್ ಜಾರಿ: ಮುಂದಿನ 2.5 ತಿಂಗಳ ಅವಧಿಯಲ್ಲಿ ಒಟ್ಟು 30 ಪ್ಯಾಕೇಜ್‌ಗಳನ್ನು ಅನುಷ್ಠಾನಗೊಳಿಸಲಾಗುವುದು. ಮೊದಲ ಹಂತದಲ್ಲಿ 4, ಎರಡನೇ ಹಂತದಲ್ಲಿ 7 ಹಾಗೂ ಮುಂದಿನ ತಿಂಗಳು 3ನೇ ಹಂತದಲ್ಲಿ 7 ಪ್ಯಾಕೇಜ್‌ಗಳು ಜಾರಿಗೆ ಬರಲಿವೆ.

ಸಮನ್ವಯತೆ ಮತ್ತು ಹೊಣೆಗಾರಿಕೆ: ಹಳೆಯ ಪದ್ಧತಿಗಳನ್ನು ಕೈಬಿಟ್ಟು ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ನಾಗರಿಕರು ಸಮನ್ವಯದಿಂದ ಕೆಲಸ ಮಾಡಬೇಕು. “ಕಸದ ವಿಚಾರದಲ್ಲಿ ನಾವು ತಲೆ ತಗ್ಗಿಸುವ ಪರಿಸ್ಥಿತಿಯಿದ್ದು, ಜನರು ನಮ್ಮನ್ನು ನೋಡುವ ದೃಷ್ಟಿ ಬದಲಾಗಿದೆ. ಸರಿಪಡಿಸಿಕೊಳ್ಳಲು ದೊರೆತಿರುವ ಈ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಗುತ್ತದೆ” ಎಂದು ಸಚಿವರು ಎಚ್ಚರಿಸಿದರು.

  • ತಂತ್ರಜ್ಞಾನ ಆಧರಿತ ಹಾಗೂ ಆಟೋಮೇಷನ್ ವ್ಯವಸ್ಥೆ : ಬಿಲ್ ಜೆನರೇಷನ್ ವ್ಯವಸ್ಥೆಯನ್ನು ಸಂಪೂರ್ಣ ಆಟೋಮೇಷನ್ ಗೊಳಿಸಬೇಕು.
  • ಪೌರಕಾರ್ಮಿಕರು, ಹೆಲ್ಪರ್, ಚಾಲಕರು ಹಾಗೂ ವಾಹನಗಳ ಹಾಜರಾತಿಯನ್ನು ‘ಸಿಂಗಲ್ ಸಾಫ್ಟ್‌ವೇರ್’ನಲ್ಲಿ ಸಂಯೋಜಿಸಬೇಕು.
  • ವಾಹನಗಳ ಫೋಟೋ, ಜಿಪಿಎಸ್ (GPS) ಟ್ರ್ಯಾಕಿಂಗ್ ಹಾಗೂ ನಿಗದಿತ 7 ರಸ್ತೆಗಳ ಸಂಚಾರ ಮಾಹಿತಿಯನ್ನು ಸರಿಯಾಗಿ ನಿರ್ವಹಿಸಿದರೆ ಶೇ. 90 ರಷ್ಟು ಸಮಸ್ಯೆ ನಿವಾರಣೆಯಾಗಲಿದೆ.
  • ಕ್ಯೂಆರ್ ಕೋಡ್ ಹಾಗೂ ನಾಗರಿಕರ ಫೀಡ್‌ಬ್ಯಾಕ್: ಪ್ರತಿಯೊಂದು ಕಸದ ವಾಹನದ ಮೇಲೆಯೂ ಕ್ಯೂಆರ್ (QR) ಕೋಡ್ ವ್ಯವಸ್ಥೆ ಇರಬೇಕು. ಸಾರ್ವಜನಿಕರು ನೇರವಾಗಿ ತಮ್ಮ ಅಭಿಪ್ರಾಯ ಮತ್ತು ದೂರುಗಳನ್ನು ದಾಖಲಿಸಲು ತಂತ್ರಾಂಶವನ್ನು ಇಂಟಿಗ್ರೇಟ್ ಮಾಡಬೇಕು.
  • ಮನೆ-ಮನೆ ತ್ಯಾಜ್ಯ ಸಂಗ್ರಹಣೆ ಹಾಗೂ ಬ್ಲಾಕ್ ಸ್ಪಾಟ್ ನಿಯಂತ್ರಣ
  •  ಕಸದ ವಾಹನಗಳು ಕಡ್ಡಾಯವಾಗಿ ಮನೆ-ಮನೆಗೆ ತೆರಳುವುದನ್ನು ಖಚಿತಪಡಿಸಿಕೊಳ್ಳಬೇಕು.
  •  ಸಣ್ಣ ಹೋಟೆಲ್‌ಗಳು, ಅಂಗಡಿಗಳು ಹಾಗೂ ಬೇಕರಿಗಳಿಂದಲೂ ಕಸವು ಪಾಲಿಕೆಯ ವಾಹನಕ್ಕೇ ತಲುಪುವಂತೆ ಅಧಿಕಾರಿಗಳು ಪರಿಶೀಲಿಸಿ ಎಚ್ಚರಿಕೆ ನೀಡಬೇಕು.
  • ಯಾವ ಮನೆ ಅಥವಾ ಅಂಗಡಿಯವರು ರಸ್ತೆಗೆ ಕಸ ಎಸೆಯುತ್ತಿದ್ದಾರೆ ಎಂಬ ಮಾಹಿತಿ ಸ್ಥಳೀಯ ಕಸದ ಗಾಡಿಯ ಸಿಬ್ಬಂದಿಗೆ ತಿಳಿದಿರುತ್ತದೆ. ಅಂತಹವರನ್ನು ಗುರುತಿಸಿ ಅರಿವು ಮೂಡಿಸುವ ಮೂಲಕ ನಗರದಲ್ಲಿ ‘ಬ್ಲಾಕ್ ಸ್ಪಾಟ್’ಗಳನ್ನು ಸಂಪೂರ್ಣವಾಗಿ ತಡೆಯಬಹುದು.
  • ಸಾರ್ವಜನಿಕರು ರಸ್ತೆಗೆ ಕಸ ಎಸೆಯದಂತೆ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.
  •  “ಬೆಂಗಳೂರು ನಮಗೆ ಅನ್ನ ಕೊಟ್ಟಿದೆ”, “ಬೆಂಗಳೂರು ನಗರ ನಮಗೆ ಅನ್ನ ನೀಡಿದೆ. ಹೀಗಾಗಿ ನಮ್ಮೂರಿನ ಮೇಲಿರುವ ಕಳಂಕವನ್ನು ತೊಡೆದುಹಾಕುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಧಿಕಾರಿಗಳು ತಮ್ಮ ಪಾತ್ರ ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ, ಎಲ್ಲರೂ ಒಟ್ಟಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಸಚಿವರು ಕರೆ ನೀಡಿದರು.

ಬಿಎಸ್‌ಡಬ್ಲ್ಯೂಎಂಎಲ್ (BSWML) ಸಿಇಓ ಕರೀಗೌಡ ಅವರಿಂದ ವಿವರಣೆ

ಸಭೆಯಲ್ಲಿ ಮಾತನಾಡಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡರವರು, “33 ಪ್ಯಾಕೇಜ್‌ಗಳಡಿ 5,431 ವಾಹನಗಳೊಂದಿಗೆ 7 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ ಪ್ರಕಾರ ಶೇ. 100 ರಷ್ಟು ತ್ಯಾಜ್ಯ ವಿಂಗಡಣೆಯಾಗುವುದು ಕಡ್ಡಾಯ. ಆರ್.ಎಫ್.ಐ.ಡಿ (RFID) ಮತ್ತು ಫೇಸ್ ರೆಕಗ್ನಿಷನ್ ಮೂಲಕ ಹಾಜರಾತಿ ನಿರ್ವಹಿಸಲಾಗುತ್ತಿದ್ದು, ಐಸಿಸಿಸಿ (ICCC) ಮೂಲಕ ಲೈವ್ ಡೇಟಾ ಮಾನಿಟರ್ ಮಾಡಲಾಗುತ್ತದೆ. ಸರಿಯಾಗಿ ಸೇವೆ ನೀಡದಿದ್ದಲ್ಲಿ ಸಿಸ್ಟಮ್‌ನಲ್ಲೇ ಬ್ಲ್ಯಾಕ್‌ಲಿಸ್ಟ್ ಸೇರ್ಪಡೆ ಹಾಗೂ ದಂಡ ವಿಧಿಸುವ ವ್ಯವಸ್ಥೆ ಇರಲಿದೆ” ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಈ ಪ್ರಮುಖ ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಅಪರ ಆಯುಕ್ತರಾದ ಕವಿತ ರಾಜಾರಾಮ್, ಲೋಖಂಡೆ ಸ್ನೇಹಲ್ ಸುಧಾಕರ್, ವೆಂಕಟ ಚಲಪತಿ ಸೇರಿದಂತೆ ಜಂಟಿ ಆಯುಕ್ತರು, ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments