Homeಕರ್ನಾಟಕಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಕುಮಾರಸ್ವಾಮಿಗೆ ಸವಾಲ್ ಹಾಕಿದ ಸಚಿವ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಕುಮಾರಸ್ವಾಮಿಗೆ ಸವಾಲ್ ಹಾಕಿದ ಸಚಿವ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ವಿತರಣಾ ಸಮಾರಂಭದಲ್ಲಿ ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾರಂಭದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ಮಂಡ್ಯಕ್ಕೆ ಇಂದು ಸುದಿನ. ಉಕ್ಕಿನ ಮಹಿಳೆ ಇಂದಿರಾಗಾಂಧಿ ಪುಣ್ಯಸ್ಮರಣೆ ದಿನದಂದು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.

2023ರಲ್ಲಿ ಮಂಡ್ಯದ 7 ಕ್ಷೇತ್ರಗಳಲ್ಲಿ 6 ಮಂದಿಯನ್ನು ಗೆಲ್ಲಿಸಿದಿರಿ. ಅಂದು ಸಿಎಂ ಸಿದ್ದರಾಮಯ್ಯ ಅವರನ್ನು , ಇಂದು  ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ಮಂಡ್ಯ ಜಿಲ್ಲೆಯ ಪಾತ್ರ ದೊಡ್ಡದಿದೆ. ಮೂರುವರೆ ವರ್ಷ ಅಣ್ಣ-ತಮ್ಮಂದಿರ ರೀತಿ ಆಡಳಿತ ನಡೆಸಿದರು. 3.5 ವರ್ಷದ ಬಳಿಕ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಿದರು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿಯೇ ಹಲವು ಯೋಜನೆ ತಂದಿದ್ದಾರೆ. ನೇಗಿಲ ಯೋಗಿ, ಶಾಲಾ ಮಕ್ಕಳಿಗೆ ಬಸ್ ಪಾಸ್ ಸೇರಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಐದು ತಿಂಗಳಲ್ಲೇ ಇಂತಹ ಕಾರ್ಯಕ್ರಮಗಳನ್ನು ಕೊಟ್ಟಿರುವ ಮುಖ್ಯಮಂತ್ರಿ ಸಿಕ್ಕಿದ್ದು ನಮ್ಮ ಪುಣ್ಯ ಎಂದರು.

ಸ್ವಾತಂತ್ರ್ಯ ತರಲು ಹೋರಾಟ ಮಾಡಿದ್ದು ಕಾಂಗ್ರೆಸ್ಸಿಗರು. ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ವಿರೋಧ ಪಕ್ಷಗಳು ಟೀಕೆ ಮಾಡಬಹುದು. ಐದು ಗ್ಯಾರಂಟಿ ಕೊಡಲು ಆಗಲ್ಲ ಅಂದ್ರು, ಆದ್ರೆ ನಾವು ಕೊಟ್ಟೆವು. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಕುಮಾರಸ್ವಾಮಿಗೆ ನೇರ ಸವಾಲ್

ಕುಮಾರಸ್ವಾಮಿ ಅವರನ್ನು 2.5 ಲಕ್ಷ ಮತಗಳಿಂದ ಗೆಲ್ಲಿಸಿ ಸಂಸದರಾಗಿ ಆಯ್ಕೆ ಮಾಡಿದ್ದೀರಿ. ಮಂಡ್ಯ ಜಿಲ್ಲೆಯ ಜನರ ಋಣವಾದರೂ ತೀರಿಸಿ. ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು.

100 ಎಕರೆ ಜಾಗ ಕೇಳಿದ್ರಿ, ಕೊಟ್ಟೆವು. ಈಗ 500 ಎಕರೆ ಬೇಕು ಅಂತೀರಾ. ಕೊಟ್ಟ 100 ಎಕರೆಯಲ್ಲಿ ಮೊದಲು ಶುರು ಮಾಡಿ. ನಂತರ 500 ಎಕರೆ ಕೊಡುತ್ತೇವೆ. ಕುಣಿಯಲಾರದವರು ನೆಲ ಡೊಂಕು ಎನ್ನುವಂತೆ ಮಾತನಾಡಬೇಡಿ ಬೇಡಿ ಎಂದು ಹರಿಹಾಯ್ದರು.

ನಮ್ಮ ಸರ್ಕಾರ ಮಂಡ್ಯ ಜಿಲ್ಲೆಗೆ 10 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದೇವೆ. ನೀವು 10 ಸಾವಿರ ಕೋಟಿ ಲೆಕ್ಕ ಕೇಳುತ್ತೀರಾ? ಲೆಕ್ಕ ಕೊಡೋದು ನಿಮಗಲ್ಲಪ್ಪ, ಜನರಿಗೆ ಲೆಕ್ಕ ಕೊಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷ ನಿಮ್ಮ ತಂದೆಯವರನ್ನು ಪ್ರಧಾನಿ ಮಾಡಿತ್ತು. ಕಾಂಗ್ರೆಸ್ ಪಕ್ಷ ನಿಮ್ಮ ಕುಟುಂಬಕ್ಕೆ ಅಧಿಕಾರ ಕೊಟ್ಟರೂ ಸ್ವಾಮಿ ನೀವು ನಮ್ಮನ್ನು ಟೀಕೆ ಮಾಡ್ತೀರಾ ಎಂದು ಕೇಳಿದರು?

ಕುಮಾರಸ್ವಾಮಿ ಅವರೇ ನಿಮ್ಮ ಕೈಯಲ್ಲಿ ಆಗುವ ಕೆಲಸ ಮಾಡಿ. ನಿಮ್ಮ ಕೈಯಲ್ಲಿ ಏನು ಆಗಲ್ಲ ಅಂತ ನನಗೆ ಗೊತ್ತು. ನಿಮ್ಮ ಜೊತೆ ಇದ್ದು ನಾನು ನೋಡಿದ್ದೇನೆ. ನಿಮಗೆ ಒಂದು ಅವಕಾಶವಿದೆ. ಪ್ರಧಾನಿಗೆ ಹೇಳಿ ಸರ್ಕಾರಿ ಸ್ವಾಮ್ಯದ ಶುಗರ್ ಫ್ಯಾಕ್ಟರಿ ಸ್ಥಾಪನೆ ಮಾಡಲು 250 ಕೋಟಿ ಅನುದಾನ ಕೊಡಿಸಿ. ಆಗ ನಿಮಗೆ ನಾನೇ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಹಿರಂಗವಾಗಿ ಸವಾಲು ಹಾಕಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿದರು. ಕೃಷಿ ಸಚಿವ ಪಿ ಎಂ ನರೇಂದ್ರಸ್ವಾಮಿ,ಶಾಸಕರಾದ ಉದಯ್,ರಮೇಶ್ ಬಾಬು ಬಂಡಿಸಿದ್ದೇಗೌಡ,ದಿನೇಶ್ ಗೂಳಿಗೌಡ,ಅಪ್ಪಾಜಿಗೌಡ,ಮೂಡ ಅಧ್ಯಕ್ಷ ಬಿ ಪಿ ಪ್ರಕಾಶ್,ವಿಜಯಲಕ್ಷ್ಮಿ ರಘುನಂದನ್,ಡಾ.ಮೂರ್ತಿ,ಎಂ ಎಸ್ ಆತ್ಮನಂದ್,ಇತರಿದ್ದರು ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ರವಿಕುಮಾರ್ ಗಣಿಗ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments