ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 43 ವಾರ್ಡ್ಗಳಲ್ಲಿ ನವೆಂಬರ್ 1ರಂದು “ವಾರ್ಡ್ ಒನ್” ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ “ವಾರ್ಡ್ ಒನ್” ಅಭಿಯಾನ ಕೈಗೊಳ್ಳುವ ಸಂಬಂಧ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್ 1ರಂದು ಐದು ನಗರ ಪಾಲಿಕೆಗಳ ವ್ಯಾಪ್ತಿಯ 43 ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯಾ ನಗರ ಪಾಲಿಕೆಗಳು ಬೆಸ್ಕಾಂ, ಜಲಮಂಡಳಿ, ಮೆಟ್ರೋ, ಸಾರಿಗೆ, ಸಂಚಾರ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಯಾ ನಗರ ಪಾಲಿಕೆಗಳ ಆಯುಕ್ತರು ತಮ್ಮ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಿದ್ಧಪಡಿಸಿರುವ ಚೆಕ್ಲಿಸ್ಟ್ಗೆ ಅನುಗುಣವಾಗಿ ಕಾರ್ಯಯೋಜನೆ ರೂಪಿಸಿಕೊಳ್ಳಬೇಕು. ಬಳಿಕ ಎಲ್ಲ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಲಭ್ಯವಿರುವ ಸಂಪೂರ್ಣ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಪ್ರಮುಖ ಜಂಕ್ಷನ್ಗಳನ್ನು ಆಯ್ಕೆ ಮಾಡಿಕೊಂಡು ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಜಂಕ್ಷನ್ಗಳ ಸ್ವಚ್ಛತೆ, ರಸ್ತೆ ಗುಂಡಿಗಳ ಮುಚ್ಚುವಿಕೆ, ರಸ್ತೆ ಮೇಲ್ಮೈ ದುರಸ್ತಿ, ಪಾದಚಾರಿ ಕ್ರಾಸಿಂಗ್ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಮಧ್ಯಮಾವಧಿ ಕಾರ್ಯಯೋಜನೆ (Medium Term Plan) ರೂಪಿಸಿ, ಅಗತ್ಯ ಅನುದಾನವನ್ನು ಮೀಸಲಿಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ರೈಲ್ವೆ ಜಾಗಗಳ ಸ್ವಚ್ಛತೆಗೆ ಆದ್ಯತೆ ನೀಡಿ
ರೈಲ್ವೆ ಇಲಾಖೆಯ ಜಾಗಗಳಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ರೈಲ್ವೆ ಜಾಗಗಳಲ್ಲಿ ತ್ಯಾಜ್ಯ ಕಂಡುಬಂದಲ್ಲಿ ಪಾಲಿಕೆಯಿಂದಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಇದೇ ರೀತಿ ಕೆ-ರೈಡ್ ಜಾಗಗಳಲ್ಲಿಯೂ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗರಿಕರನ್ನು ಅಭಿಯಾನದಲ್ಲಿ ತೊಡಗಿಸಿಕೊಳ್ಳಿ
“ವಾರ್ಡ್ ಒನ್” ಅಭಿಯಾನವನ್ನು ನಾಗರಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಕಾರದೊಂದಿಗೆ ನಡೆಸಬೇಕು. ಸ್ವಚ್ಛತಾ ಕಾರ್ಯದ ಕುರಿತು ಅಧಿಕಾರಿಗಳು ನಾಗರಿಕರಲ್ಲಿ ಅರಿವು ಮೂಡಿಸಿ, ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಐದು ನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಆಯ್ಕೆ ಮಾಡಿರುವ ವಾರ್ಡ್ಗಳ ವಿವರ
– ಕೇಂದ್ರ ನಗರ ಪಾಲಿಕೆ: 6 ವಾರ್ಡ್ಗಳು
– ಉತ್ತರ ನಗರ ಪಾಲಿಕೆ: 7 ವಾರ್ಡ್ಗಳು
– ದಕ್ಷಿಣ ನಗರ ಪಾಲಿಕೆ: 12 ವಾರ್ಡ್ಗಳು
– ಪಶ್ಚಿಮ ನಗರ ಪಾಲಿಕೆ: 10 ವಾರ್ಡ್ಗಳು
– ಪೂರ್ವ ನಗರ ಪಾಲಿಕೆ: 8 ವಾರ್ಡ್ಗಳು
ಒಟ್ಟು: 43 ವಾರ್ಡ್ಗಳು
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಅಪರ ಆಯುಕ್ತರಾದ ಕವಿತಾ ರಾಜಾರಾಂ, ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಮೆಟ್ರೋ, ಬೆಸ್ಕಾಂ, ಕೆಎಸ್ಆರ್ಟಿಸಿ, ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


