Homeಕರ್ನಾಟಕಮೋದಿ ಮೆಚ್ಚಿದ ಕೆಲಸವನ್ನೂ ಬಿಜೆಪಿ ಒಪ್ಪಲ್ಲ: ಪ್ರಿಯಾಂಕ್ ಖರ್ಗೆ

ಮೋದಿ ಮೆಚ್ಚಿದ ಕೆಲಸವನ್ನೂ ಬಿಜೆಪಿ ಒಪ್ಪಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ ತೊಗರಿ ರಫ್ತು, ರೊಟ್ಟಿ ಬ್ರಾಂಡಿಂಗ್ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ; ಆರ್‌ಎಸ್‌ಎಸ್ ಮತ್ತು ಚುನಾವಣಾ ಬಾಂಡ್ ವಿಚಾರವಾಗಿಯೂ ಅಶೋಕ್‌ಗೆ ಪ್ರಶ್ನೆ

ನಮ್ಮ ಸಾಧನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿಕೊಳ್ಳುತ್ತಿದ್ದರೂ ಕರ್ನಾಟಕದ ಬಿಜೆಪಿ ನಾಯಕರು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದನ್ನು ಉಲ್ಲೇಖಿಸಿ, ಬಿಜೆಪಿಯ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ತಮ್ಮ ಸಾಧನೆ ಮತ್ತು ಕೆಲಸಗಳನ್ನು ಪ್ರಶ್ನಿಸುವುದು ಬಿಜೆಪಿ ನಾಯಕರಿಗೆ ನಿತ್ಯದ ಉದ್ಯೋಗದಂತಾಗಿದೆ. ಉತ್ತರ ಕೊಟ್ಟರೂ ಮತ್ತೆ ಅದೇ ಪ್ರಶ್ನೆಗಳನ್ನು ಎತ್ತುವುದು ಅವರ ಹವ್ಯಾಸವಾಗಿದೆ. ಆದರೆ, ಬಿಜೆಪಿ ನಾಯಕರ ಪ್ರಶ್ನೆಗಳಿಗೆ ತಾವು ಉತ್ತರಿಸುವ ಬದಲು ಕೇಂದ್ರ ಸರ್ಕಾರವೇ ತಮ್ಮ ಕೆಲಸಗಳಿಗೆ ಪುರಾವೆ ಒದಗಿಸುತ್ತಿದೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಬಿಜೆಪಿಯವರಿಗೆ ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವೇ ಉತ್ತರವಾಗಿದೆ. ಕಲಬುರಗಿ ಖಡಕ್ ರೊಟ್ಟಿಯ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡ ಕ್ರಮಗಳಿಂದ ಈ ಉತ್ಪನ್ನಕ್ಕೆ ಜಾಗತಿಕ ಮಾರುಕಟ್ಟೆ ದೊರೆಯುತ್ತಿದೆ. ಈ ಹಿಂದೆ ಕಲಬುರಗಿ ರೊಟ್ಟಿಯ ಕುರಿತು ಪ್ರಸ್ತಾಪಿಸಿದ್ದ ಮೋದಿ ಅವರು, ಇದೀಗ ಜಿಐ ಟ್ಯಾಗ್ ಪಡೆದ ಕಲಬುರಗಿ ತೊಗರಿಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡುತ್ತಿರುವ ಉಪಕ್ರಮದ ಬಗ್ಗೆಯೂ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಕಲಬುರಗಿ ತೊಗರಿಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಮೂಲಕ ಜಿಲ್ಲೆಯ ರೈತರಿಗೆ ಶೇ.30ರಷ್ಟು ಹೆಚ್ಚು ಧಾರಣೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಖರ್ಗೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ಬೆಳೆಯುವ ಹೆಸರು, ತೊಗರಿ, ಉದ್ದು ಮತ್ತು ಹುರುಳಿ ಮುಂತಾದ ಬೆಳೆಗಳಿಗೆ ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮಾಡುವ ಉದ್ದೇಶದಿಂದ ಎನರ್ಜಿ ಬಾರ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮವೂ ಜಾರಿಯಲ್ಲಿದೆ ಎಂದು ವಿವರಿಸಿದ್ದಾರೆ.

ಕಲಬುರಗಿ ಪಲ್ಸ್, ಭೀಮಾ ಪಲ್ಸ್, ಕಲಬುರಗಿ ಖಡಕ್ ರೊಟ್ಟಿ ಮತ್ತು ಕಮಲಾಪುರ ಕೆಂಪು ಬಾಳೆ ಸೇರಿದಂತೆ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ರೈತರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದಿದ್ದಾರೆ.

ಅಶೋಕ್‌ಗೆ ಆರ್‌ಎಸ್‌ಎಸ್ ವಿಚಾರವಾಗಿ ಪ್ರಶ್ನೆ

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಪ್ರಿಯಾಂಕ್ ಖರ್ಗೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಹೊರತುಪಡಿಸಿದರೆ ಬಿಜೆಪಿಯವರಿಗೆ ಜಗತ್ತಿನ ಇತರ ದೇಶಗಳ ಪರಿಚಯವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಆರ್‌ಎಸ್‌ಎಸ್ ಅಮೆರಿಕದಿಂದ ದೇಣಿಗೆ ಪಡೆದಿರುವ ವಿಚಾರವನ್ನು ಅಶೋಕ್ ಅವರಿಗೆ ಅವರ ಸಂಘದವರು ತಿಳಿಸಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂಬ ಮೋಹನ್ ಭಾಗವತ್ ಅವರ ಹೇಳಿಕೆಯ ಹಿಂದಿನ ಉದ್ದೇಶವೇನು ಎಂದೂ ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವವರು ಕಾಂಗ್ರೆಸ್‌ನವರಲ್ಲ, ಸಂಘದವರೇ ಎಂದು ಆರೋಪ ಮಾಡಿದ್ದಾರೆ.

ಆರ್‌ಎಸ್‌ಎಸ್‌ನ ಹೇಳಿಕೆಗಳನ್ನು ಗಮನಿಸಿದ್ದರೆ ಅಶೋಕ್ ಅವರು ಇಂತಹ ಹೇಳಿಕೆಗಳನ್ನು ನೀಡುವ ಪರಿಸ್ಥಿತಿ ಬರುತ್ತಿರಲಿಲ್ಲ. ವಿರೋಧ ಪಕ್ಷದ ನಾಯಕರು ಆರ್‌ಎಸ್‌ಎಸ್‌ನ ವಿಚಾರಧಾರೆ, ದೇಶದ ಇತಿಹಾಸ ಮತ್ತು ಸಂಘಟನೆಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾನೂನು ಮತ್ತು ಸಂವಿಧಾನದ ಬಗ್ಗೆ ಈಗಲಾದರೂ ಆರ್‌ಎಸ್‌ಎಸ್‌ಗೆ ಅರಿವು ಮೂಡಿದೆಯೇ ಎಂದು ವ್ಯಂಗ್ಯವಾಡಿರುವ ಖರ್ಗೆ, ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಬಿಜೆಪಿಯೇ ಆಗಿದ್ದು, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಅಕ್ರಮಗಳ ಕುರಿತ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಇನ್ನೂ ಉತ್ತರಿಸಬೇಕಿದೆ. ಆ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿದೆಯೇ ಎಂದು ಸವಾಲು ಹಾಕಿದ್ದಾರೆ.

ನಾಯಕತ್ವಕ್ಕಾಗಿ ದ್ವೇಷದ ರಾಜಕಾರಣವೇ?

ಬಿಜೆಪಿಯಲ್ಲಿ ನಾಯಕರೆನಿಸಿಕೊಳ್ಳಬೇಕಾದರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಬೇಕು ಮತ್ತು ಪಾಕಿಸ್ತಾನದ ಹೆಸರನ್ನು ಪದೇಪದೆ ಪ್ರಸ್ತಾಪಿಸಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಅಶೋಕ್ ಅವರು ನಾಯಕರೆನಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆಯೇ ಎಂದು ಟೀಕಿಸಿದ್ದಾರೆ.

ಬಿಜೆಪಿ ನಾಯಕರು ತಮ್ಮ ಸಾಧನೆಗಳನ್ನು ಟೀಕಿಸುವ ಮೊದಲು ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕೇಳಬೇಕು. ಬಳಿಕ ಆತ್ಮಸಾಕ್ಷಿಯಿಂದ ತಮ್ಮ ‘ದಿಲ್ ಕಿ ಬಾತ್’ ಮಾತನಾಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments