ಅಸ್ಪೃಶ್ಯತೆ ಆಚರಣೆ ಕಾಂಗ್ರೆಸ್ ಸರ್ಕಾರದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಮೈಸೂರು ದಸರಾ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರಸ್ವಾಮಿ ಹಾಗೂ ಬಸವಂತಪ್ಪ ಅವರಿಗೆ ಮಾಡಿದ ಅವಮಾನವೇ ಉದಾಹರಣೆ ಎಂದು ಸಂಸದ ಮತ್ತು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಚಿವರು ಬಂದರೆ ಪೂಜಾಸ್ಥಳ ಅಪವಿತ್ರ ಆಗಲಿದೆ ಎಂದು ಹೀಗೆ ಮಾಡಲಾಗಿದೆ; ಸಚಿವರಿಗೆ ಒಳಗೆ ಬಿಡದೆ ಅವಮಾನ ಮಾಡಿರುವುದು ಶಿಷ್ಟಾಚಾರ ಉಲ್ಲಂಘನೆ ಅಲ್ಲ, ಬದಲಿಗೆ ಅದು ಅಸ್ಪೃಶ್ಯತೆ ಆಚರಣೆ ಎಂದು ಟೀಕಿಸಿದರು.
ಕಾಂಗ್ರೆಸ್ನಲ್ಲಿ ಇಂತಹುದು ನಡೆದರೂ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮನುವಾದಿ ಎಂದು ದೂರುತ್ತಾರೆ. ಹಾಗಾದರೆ ಕಾಂಗ್ರೆಸ್ ಜಾತ್ಯತೀತವಾದಿಯೇ ಅಥವಾ ಕೋಮುವಾದಿಯೇ ಎಂಬುದನ್ನು ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಖರ್ಗೆ ಅವರು ಹೇಳಲಿ ಎಂದು ಒತ್ತಾಯಿಸಿದರು.
ಸಂವಿಧಾನ ಬದಲಿಸುವ ಸುಳ್ಳು ಹೇಳಿಕೆ…
ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ನವರು ಸುಳ್ಳು ಹೇಳುತ್ತಾ ಬಂದರು. ಆದರೆ ಅಸಲಿ ಸತ್ಯ ಎಂದರೆ ಸಂವಿಧಾನ ಬದಲಿಸುತ್ತಾ ಬಂದವರು ಕಾಂಗ್ರೆಸ್ನವರು. ತಮ್ಮ ಸ್ವಾರ್ಥಕ್ಕಾಗಿ ಹಲವು ತಿದ್ದುಪಡಿ ತಂದರು. ಅವೆಲ್ಲ ದೇಶದ ಜನ ಮತ್ತು ದಲಿತರಿಗಾಗಿ ಅಲ್ಲವೇ ಅಲ್ಲ. ವಾಜಪೇಯಿ ಅವರೊಬ್ಬರೇ ದಲಿತರಿಗಾಗಿ ಸಂವಿಧಾನ ಬದಲು ಮಾಡಿದರು. ದಲಿತರಿಗೆ ಮೀಸಲಾತಿ ನೀಡಿದವರು ವಾಜಪೇಯಿ ಎಂದು ವಿವರಿಸಿದರು.
ಹರಿಪ್ರಸಾದ್ ಬಾಯಿ ಬಿಡಲಿ…
ಆರ್.ಎಸ್.ಎಸ್ ಮನುವಾದಿ ಮತ್ತು ಬಿಜೆಪಿ ದಲಿತ ವಿರೋಧಿ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಭಯಂಕರ ಮಾತನಾಡುತ್ತಾರೆ. ಆದರೆ ಇಂದು ದಲಿತ ಸಚಿವರಿಗೆ ಅವಮಾನ ಆದರೂ ಅವರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅವರೀಗ ಕಾಂಗ್ರೆಸ್ ಜಾತ್ಯತೀತವಾದಿಯೇ ಅಥವಾ ಕೋಮುವಾದಿಯೇ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಪೌರ ಕಾರ್ಮಿಕರ ಮಗ ಬಸವಂತಪ್ಪ ಅವರನ್ನು ಸಚಿವರನ್ನಾಗಿ ಮಾಡಿದೆವು ಎಂದು ಡಿ.ಕೆ.ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಅವರು ಬೆನ್ನು ತಟ್ಟಿಕೊಂಡರು. ಆದರೆ ಈಗ ಪೌರ ಕಾರ್ಮಿಕನ ಮಗನನ್ನು ಪೌರ ಕಾರ್ಮಿಕನ ರೀತಿಯೇ ನಡೆಸಿಕೊಳ್ಳುತ್ತಿದ್ದಾರೆ. ಶಿವರಾಜ್ ತಂಗಡಗಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು. ಅವರಿಗೆ ದಸರಾದಲ್ಲಿ ಗೌರವ ಸಿಗಬೇಕಿತ್ತು. ನಾನೂ ಆ ಇಲಾಖೆ ಸಚಿವನಾಗಿ ದಸರಾ ಆಚರಿಸಿದ್ದೇನೆ ಎಂದು ಹೇಳಿದರು.
ಕೊಳಕು ಮನಸ್ಥಿತಿಯ ಪಕ್ಷ….
ಇಂತಹ ಕೊಳಕು ಮನಸ್ಥಿತಿಯ ಪಕ್ಷವನ್ನು ನಾನು ನೋಡಿಲ್ಲ. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ದಲಿತರಿಗೆ ಅವಮಾನ ಮಾಡಿಕೊಂಡೇ ಬಂದಿದೆ. ದಲಿತರನ್ನು ಕಾಂಗ್ರೆಸ್ ಎಂದೂ ಗೌರವದಿಂದ ನಡೆಸಿಕೊಂಡಿಲ್ಲ. ಇದನ್ನು ಖಂಡಿಸಲಾಗುವುದು ಎಂದು ಹೇಳಿದರು.
ದಸರಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಒಳಗೆ ಬಿಡದೆ ತಡೆದರು ಎಂದರೆ ಇದನ್ನು ಕೇವಲ ಪೊಲೀಸ್ ಅಧಿಕಾರಿ ಮಾಡಿರಲು ಸಾಧ್ಯವಿಲ್ಲ. ಇದು ಸರ್ಕಾರದ ವೈಫಲ್ಯ. ಸರ್ಕಾರವೇ ಅಸ್ಪೃಶ್ಯತೆ ಆಚರಿಸುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಸ್ಟಿಂಗ್ ಆಪರೇಷನ್ ಸಿಬಿಐ ತನಿಖೆಯಾಗಲಿ…
ಸ್ಟಿಂಗ್ ಆಪರೇಷನ್, ವಿಡಿಯೋ ಬಿಡುಗಡೆ ಮಾಡುವುದು ಕೆಟ್ಟ ಸಂಸ್ಕೃತಿ. ಸಚಿವರು, ಶಾಸಕರು, ಸಂಸದರ ನಡವಳಿಕೆ ಸಮಾಜದಲ್ಲಿ ಆದರ್ಶವಾಗಿರಬೇಕು. ಆದರೆ, ಇಂದು ಬ್ಲ್ಯಾಕ್ ಮೇಲ್ ರಾಜಕಾರಣ ರಾಜ್ಯದಲ್ಲಿ ಅತ್ಯಂತ ಹೆಚ್ಚಾಗಿದೆ. ಐವತ್ತು ವರ್ಷ ಗೌರವದಿಂದ ರಾಜಕಾರಣ ಮಾಡಿದ ಸಿದ್ದರಾಮಯ್ಯ ಅವರ ಮರ್ಯಾದೆಯನ್ನು ಸ್ಟಿಂಗ್ ಆಪರೇಷನ್ ಮೂಲಕ ತೆಗೆದಿದ್ದಾರೆ. ಇದರ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಇಲ್ಲವೇ ನ್ಯಾಯಮೂರ್ತಿಗಳಿಂದ ನಡೆಸಬೇಕು ಎಂದು ಹೇಳಿದರು.


