ಈಗಿನ ಕಾಲಘಟ್ಟದಲ್ಲಿ ಎಲ್ಲ ರಂಗಗಳಲ್ಲೂ ಉತ್ತಮ ಅವಕಾಶಗಳಿದ್ದು, ಮಹಿಳೆಯರು ಸ್ವಾವಲಂಬಿಗಳಾಗಿ ಮತ್ತು ಬುದ್ಧಿವಂತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ‘ಅಸ್ಮಿತೆ – ನಾರಿ ಶಕ್ತಿ ಅನಾವರಣ’ ಸ್ತಬ್ಧಚಿತ್ರವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ವೀಕ್ಷಣೆಗಾಗಿ ಲೋಕಾರ್ಪಣೆಗೊಳಿಸಿದ ಬಳಿಕ ಸಚಿವರು ಮಾತನಾಡಿದರು.
”ರಾಷ್ಟ್ರಪತಿ, ಪ್ರಧಾನಿಯಾಗಿ ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ದೇಶದ ಆರ್ಥಿಕತೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಎಲ್ಲ ರಂಗಗಳಲ್ಲೂ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಜಿ.ಪಂ. ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹ ಮಹಿಳೆಯರೇ ಆಗಿದ್ದಾರೆ ಎಂದರು.
ವಿದ್ಯಾರ್ಥಿನಿಯರ ಸಾಧನೆ ಪ್ರತಿ ಮನೆಯನ್ನೂ ಮುಟ್ಟಬೇಕು. ಮಂಡ್ಯದ ಹೆಣ್ಣುಮಕ್ಕಳು ಇಡೀ ಇಂಡಿಯಾ ತಲುಪಬೇಕು. ಮಂಡ್ಯವೇ ಇಂಡಿಯಾ, ಹೀಗಾಗಿ ದೇಶದ ಗಡಿ ದಾಟಿ ಜಾಗತಿಕ ಮಟ್ಟದಲ್ಲೂ ನಮ್ಮ ಮಹಿಳೆಯರು ಸಾಧನೆ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.
ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಂಡ್ಯ ಜಿಲ್ಲಾ ಪಂಚಾಯತಿಯ ‘ಅಸ್ಮಿತೆ – ನಾರಿ ಶಕ್ತಿ ಅನಾವರಣ’ ಸ್ತಬ್ಧಚಿತ್ರವು ದ್ವಿತೀಯ ಬಹುಮಾನ ಪಡೆದಿರುವುದನ್ನು ಇದೇ ವೇಳೆ ಸಚಿವರು ಶ್ಲಾಘಿಸಿದರು.
ಈ ವೇಳೆ ಶಾಸಕ ರವಿಕುಮಾರ್ ಗಾಣಿಗ, ಜಿಲ್ಲಾಧಿಕಾರಿ ಡಾ. ಕುಮಾರ, ಜಿ.ಪಂ. ಸಿಇಒ ಡಾ. ನಂದಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸ್ತಬ್ಧಚಿತ್ರ :
ಮಂಡ್ಯ ಜಿಲ್ಲಾ ಪಂಚಾಯತ್ ಸಿದ್ಧಪಡಿಸಿರುವ ಈ ಸ್ತಬ್ಧಚಿತ್ರವು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಾಧನೆಗಳನ್ನು ಬಿಂಬಿಸುತ್ತಿದೆ. ತಾಯಿಯೊಬ್ಬಳು ಮಗುವಿಗೆ ಎದೆಹಾಲು ಕುಡಿಸುತ್ತಿರುವುದು, ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಬೀಗುತ್ತಿರುವುದು, ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಮಹಿಳೆಯರು, ‘ಶಿಶು ಸಂಜೀವಿನಿ’ ಯೋಜನೆಯಡಿ ಎದೆಹಾಲಿನ ಸಂಗ್ರಹಣಾ ಕೇಂದ್ರ, ಅಂಗನವಾಡಿ ಕಾರ್ಯಕರ್ತೆ, ಅಕ್ಕ ಕೆಫೆ, ಶಿಶುಪಾಲನಾ ಕೇಂದ್ರ, ಮುಟ್ಟಿನ ಕಪ್ (Menstrual cup), ಮುಟ್ಟಿನ ರಜೆ, ದಾದಿ, ವೈದ್ಯರು, ಅಕ್ಕಪಡೆ, ಭವಿಷ್ಯದಲ್ಲಿ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ, ಮಹಿಳೆಯರ ಮೇಲಿನ ಶೋಷಣೆ ಹಾಗೂ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಪದವೀಧರೆಯಾಗುವ ಸಾಧನೆಯನ್ನು ಇದು ಅನಾವರಣಗೊಳಿಸಿದೆ.
ಮಂಡ್ಯದ ಹೈನುಗಾರಿಕೆ, ಕೃಷಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಮನೆಗೆಲಸದೊಂದಿಗೆ ಉದ್ಯೋಗವನ್ನೂ ನಿಭಾಯಿಸುವ ಮಹಿಳೆಯರ ಸಂಪೂರ್ಣ ಬದುಕಿನ ಚಿತ್ರಣವನ್ನು ಈ ‘ಅಸ್ಮಿತೆ – ನಾರಿ ಶಕ್ತಿ ಅನಾವರಣ’ ಸ್ತಬ್ಧಚಿತ್ರವು ತೆರೆದಿಟ್ಟಿದೆ.
ಈ ಎಲ್ಲ ಅಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮಹಿಳೆಯರ ಬದುಕನ್ನು ಕಟ್ಟಿಕೊಟ್ಟಿರುವ ಸ್ತಬ್ಧಚಿತ್ರದ ಕುರಿತು ಭಾವುಕರಾದರು. ಬಳಿಕ ಸ್ತಬ್ಧ ಚಿತ್ರದ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದುಕೊಂಡರು.


