Homeದೇಶರಾಹುಲ್ ಗಾಂಧಿಗೆ ಮೋದಿ ಪರೋಕ್ಷ ಟಾಂಗ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ರಾಹುಲ್ ಗಾಂಧಿಗೆ ಮೋದಿ ಪರೋಕ್ಷ ಟಾಂಗ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಇಡೀ ಜಗತ್ತು ಹೊಸ ವ್ಯವಸ್ಥೆಯತ್ತ ಸಾಗುತ್ತಿರುವಾಗ, ಭಾರತದಲ್ಲಿ ಕೆಲವರು ಅವ್ಯವಸ್ಥೆ ಸೃಷ್ಟಿಯಾಗಲಿ ಎಂದು ಬಯಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಎನ್‌ಡಿಟಿವಿ ವಿಶ್ವ ಸಮಾವೇಶ-2026’ರ ಉದ್ಘಾಟನಾ ದಿನವಾದ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ನಾಯಕನನ್ನು ಮುಂಚೂಣಿಗೆ ತರುವ ಪ್ರಯತ್ನಗಳಲ್ಲಿ ಮತ್ತೆ ಮತ್ತೆ ವಿಫಲವಾಗುತ್ತಿದೆ ಎಂದು ಟೀಕಿಸುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ವ್ಯಂಗವಾಡಿದರು.

ಕಾಂಗ್ರೆಸ್ ಪಕ್ಷ ಪರಾವಲಂಬಿಯಾಗಿದೆ ಎಂದು ಆರೋಪಿಸಿದ ಮೋದಿ, ಅಧಿಕಾರ ಕಳೆದುಕೊಂಡ ಬಳಿಕ ತನಗೆ ಸಿಗದ ದ್ರಾಕ್ಷಿ ಹುಳಿ ಎಂಬಂತೆ, ಪಕ್ಷವು ಬಳ್ಳಿಯನ್ನೇ ನಾಶ ಮಾಡಲು ಹೊರಟಿದೆ ಎಂದರು.

ಜಗತ್ತಿನಲ್ಲಿ ಅಶಾಂತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ ತನ್ನ ಬಲಿಷ್ಠ ವ್ಯವಸ್ಥೆ ಮತ್ತು ಅಭಿವೃದ್ಧಿಯನ್ನು ಜಗತ್ತಿಗೆ ತೋರಿಸಬೇಕಿದೆ. ಆದರೆ, ಕೆಲವರು ದೇಶದ ಸಾಧನೆಗಳನ್ನು ಮುಂದಿಡುವ ಬದಲು ದೇಶದ ಹೆಸರಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ವಿದೇಶಗಳಿಗೆ ತೆರಳಿ ದೇಶದ ವಿರುದ್ಧ ಮಾತನಾಡುವುದರ ಜೊತೆಗೆ, ಭಾರತದ ಆಂತರಿಕ ವಿಚಾರಗಳಲ್ಲಿ ವಿದೇಶಿಯರು ಮಧ್ಯಪ್ರವೇಶಿಸಬೇಕು ಎಂದು ಬಯಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.

ಕಾಂಗ್ರೆಸ್ ತನ್ನ ನಾಯಕನನ್ನು ಮತ್ತೆ ಮತ್ತೆ ಮುಂಚೂಣಿಗೆ ತರುವ ಪ್ರಯತ್ನವನ್ನು ಬಾಹ್ಯಾಕಾಶ ಉಡಾವಣೆಗಳಿಗೆ ಹೋಲಿಸಿದ ಪ್ರಧಾನಿ, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಒಂದು ವರ್ಷದಲ್ಲಿ ನಡೆಯುವ ಉಡಾವಣೆಗಳಿಗಿಂತಲೂ ಹೆಚ್ಚು ಬಾರಿ ಕಾಂಗ್ರೆಸ್ ತನ್ನ ನಾಯಕನನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿ ವಿಫಲವಾಗಿದೆ ಎಂದು ಟೀಕಿಸಿದರು.

ಒಂದು ಕುಟುಂಬದ ವೈಫಲ್ಯದ ಕಳಂಕವನ್ನು ಮರೆಮಾಚಲು ದೇಶದ ಸಾಧನೆ, ಗೌರವ ಮತ್ತು ಅಭಿವೃದ್ಧಿಯನ್ನು ಪಣಕ್ಕಿಡಲಾಗುತ್ತಿದೆ ಎಂದು ಆರೋಪಿಸಿದ ಅವರು, ನೆಹರೂ-ಗಾಂಧಿ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಹೊರೆಯಾಗಿದೆ ಎಂಬ ಅಭಿಪ್ರಾಯ ಪಕ್ಷದ ಹಿರಿಯ ನಾಯಕರಲ್ಲಿಯೂ ಇದೆ. ಈ ಕುರಿತು ಕೆಲವರು ಖಾಸಗಿಯಾಗಿ ಚರ್ಚಿಸುತ್ತಾರೆ ಎಂದರು.

ಕಾಂಗ್ರೆಸ್ ತನ್ನ ರಾಜಕೀಯ ಭವಿಷ್ಯಕ್ಕಾಗಿ ಮತ್ತೆ ಮತ್ತೆ ಅದೇ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಟೀಕಿಸಿದ ಮೋದಿ, ದೇಶದ ಅಭಿವೃದ್ಧಿ ಮತ್ತು ಸಾಧನೆಗಳಿಗೆ ಆದ್ಯತೆ ನೀಡಬೇಕೆಂದು ಒತ್ತಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments