ಸುಸ್ಥಿರತೆ, ಘನತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಸುವ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಯಾರ್ಕ್ ಹಾಗೂ ನಾರ್ತ್ ಯಾರ್ಕ್‌ಷೈರ್ ಪ್ರದೇಶಗಳ ನಡುವೆ ಸಹಕಾರವನ್ನು ಬಲಪಡಿಸಲು ಮುಂದಿನ ಮೂರು ವರ್ಷಗಳಲ್ಲಿ ಸ್ಪಷ್ಟ ಆದ್ಯತೆಗಳೊಂದಿಗೆ ಜಂಟಿ ನಾವೀನ್ಯತಾ ಕಾರ್ಯಕ್ರಮಗಳು, ಶ್ರೇಷ್ಠತಾ ಕೇಂದ್ರಗಳು (Centres of Excellence) ಮತ್ತು ಪ್ರಾಯೋಗಿಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲಯನ್ಸ್ ಈ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಸಿದ್ಧ ವೇದಿಕೆಯನ್ನು ಒದಗಿಸಲಿದೆ. ಎರಡೂ ಕಡೆಯ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ತಮ ಹೊಂದಾಣಿಕೆಯಿದ್ದು, ಜಂಟಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸರ್ಕಾರದಿಂದ ಸರ್ಕಾರಕ್ಕೆ ಸಹಭಾಗಿತ್ವದ ಮೂಲಕ ಸ್ಪಷ್ಟ ಹಾಗೂ ಅಳೆಯಬಹುದಾದ ಫಲಿತಾಂಶಗಳನ್ನು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಷೈರ್ ಮೇಯರ್ ಡೇವಿಡ್ ಸ್ಕೈತ್ ಅವರೊಂದಿಗಿನ ಸಭೆಯ ಬಳಿಕ ಮಾತನಾಡಿದ ಸಚಿವರು, ಸಹಕಾರದ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಎರಡೂ ಕಡೆಯ ಸಂಸ್ಥೆಗಳನ್ನು ಗುರುತಿಸಿ, ಆದ್ಯತೆಯ ಕ್ಷೇತ್ರಗಳಲ್ಲಿ ನಿರ್ದಿಷ್ಟ ಪ್ರಾಯೋಗಿಕ ಯೋಜನೆಗಳನ್ನು ತ್ವರಿತವಾಗಿ ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.
ಈ ಸಭೆಯ ನಂತರ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಯುನೈಟೆಡ್ ಕಿಂಗ್‌ಡಮ್‌ನ ಯುನಿವರ್ಸಿಟಿ ಆಫ್ ಯಾರ್ಕ್‌ನೊಂದಿಗೆ ಸಹಕಾರದ ಉದ್ದೇಶ ಪತ್ರಕ್ಕೆ (Letter of Intent–LoI) ಸಹಿ ಹಾಕಿತು.
ಈ ಒಡಂಬಡಿಕೆಯು ನಾವೀನ್ಯತೆ, ಸಂಶೋಧನೆ, ತಂತ್ರಜ್ಞಾನ, ಉದ್ಯಮಶೀಲತೆ, ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ಪ್ರವೇಶ ಹಾಗೂ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಸ್ಥೆಗಳ ನಡುವಿನ ಸಹಕಾರವನ್ನು ವಿಸ್ತರಿಸಲು ಚೌಕಟ್ಟನ್ನು ಒದಗಿಸಲಿದೆ. ಜೈವಿಕ ಆರ್ಥಿಕತೆ, ಸ್ವಚ್ಛ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪ್ರಮುಖ ಸಹಕಾರದ ಕ್ಷೇತ್ರಗಳಾಗಿ ಗುರುತಿಸಲಾಗಿದೆ.
ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಷೈರ್ ಜೈವಿಕ ಆರ್ಥಿಕತೆ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಸುಸ್ಥಿರ ರಸಾಯನಶಾಸ್ತ್ರ, ಕೃಷಿ ನಾವೀನ್ಯತೆ ಮತ್ತು ಸ್ವಚ್ಛ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿವೆ. ಕರ್ನಾಟಕವು ಜೈವಿಕ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು ಮತ್ತು ಎಂಜಿನಿಯರಿಂಗ್ ಪ್ರತಿಭೆಗಳ ದೃಢ ನೆಲೆಯನ್ನು ಹೊಂದಿದೆ. ಈ ಎರಡೂ ಪ್ರದೇಶಗಳ ಸಾಮರ್ಥ್ಯಗಳನ್ನು ಪರಸ್ಪರ ಜೋಡಿಸುವ ಮೂಲಕ ಸಂಶೋಧನಾ ಫಲಿತಾಂಶಗಳನ್ನು ಪ್ರಾಯೋಗಿಕ ಪರಿಹಾರಗಳಾಗಿ ಮತ್ತು ವಾಣಿಜ್ಯ ಅವಕಾಶಗಳಾಗಿ ಪರಿವರ್ತಿಸಲು ಸಾಧ್ಯವಾಗಲಿದೆ.
ಸುಸ್ಥಿರತೆ, ಜಲ ಸಂಪನ್ಮೂಲ ನಿರ್ವಹಣೆ, ಸಾರಿಗೆ, ಭದ್ರತೆ ಮತ್ತು ಪೊಲೀಸ್ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಯೂ ಸಹಕಾರದ ಅವಕಾಶಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಮುಂದಿನ ಹಂತದಲ್ಲಿ ಸೀಮಿತ ಸಂಖ್ಯೆಯ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿ, ಈ ಒಡಂಬಡಿಕೆಯನ್ನು ಜಂಟಿ ಪ್ರಾಯೋಗಿಕ ಯೋಜನೆಗಳು, ಸಂಶೋಧನಾ ಸಹಯೋಗಗಳು, ಸ್ಟಾರ್ಟ್‌ಅಪ್‌ಗಳ ನಡುವಿನ ಸಂಪರ್ಕ ಮತ್ತು ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕೆ ಪೂರಕವಾದ ಕಾರ್ಯಚೌಕಟ್ಟಾಗಿ ರೂಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.


