Homeಕರ್ನಾಟಕರೈತರ ಹಿತ, ಕುಡಿಯುವ ನೀರಿನ ಭದ್ರತೆಗೆ ಆದ್ಯತೆ: ವಿಜಯಾನಂದ ಕಾಶಪ್ಪನವರ್

ರೈತರ ಹಿತ, ಕುಡಿಯುವ ನೀರಿನ ಭದ್ರತೆಗೆ ಆದ್ಯತೆ: ವಿಜಯಾನಂದ ಕಾಶಪ್ಪನವರ್

ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಖಚಿತಪಡಿಸುವುದರ ಜೊತೆಗೆ, ಮುಂಬರುವ ಬೇಸಿಗೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಮರ್ಪಕ ಜಲ ನಿರ್ವಹಣೆಗೆ ಆದ್ಯತೆ ನೀಡುವ ಕುರಿತು ಕೃಷ್ಣಾ ಮೇಲ್ದಂಡೆ ಯೋಜನೆಯ 2026–27ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.

ವಿಕಾಸಸೌಧದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಹಿಂಗಾರು ಹಂಗಾಮಿನ ನೀರಾವರಿ ಯೋಜನೆ ಹಾಗೂ ಮುಂಬರುವ ಬೇಸಿಗೆಯ ಕುಡಿಯುವ ನೀರಿನ ಅಗತ್ಯತೆಗಳ ಕುರಿತು ಚರ್ಚಿಸಲಾಯಿತು.

ಕಾಲುವೆಗಳ ದುರಸ್ತಿ ಮತ್ತು ಆಧುನೀಕರಣಕ್ಕೆ ಒತ್ತು

ಜೇವರ್ಗಿ ವಿಧಾನಸಭಾ ಕ್ಷೇತ್ರದ ನೀರಿನ ಅಗತ್ಯತೆಗಳ ಕುರಿತು ಸಭೆಯಲ್ಲಿ ವಿಶೇಷವಾಗಿ ಗಮನ ಸೆಳೆಯಲಾಯಿತು. ಸುಮಾರು 25ರಿಂದ 30 ವರ್ಷಗಳಷ್ಟು ಹಳೆಯದಾದ ಕಾಲುವೆಗಳಲ್ಲಿ ನೀರಿನ ಸೋರಿಕೆ ಉಂಟಾಗುತ್ತಿರುವ ಸಮಸ್ಯೆ, ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳ ದುರಸ್ತಿ ಮತ್ತು ಆಧುನೀಕರಣದ ಅಗತ್ಯತೆಗಳ ಕುರಿತು ಪ್ರಸ್ತಾಪಿಸಲಾಯಿತು. ಕಾಲುವೆಗಳ ದಕ್ಷತೆ ಸುಧಾರಿಸಿ, ನೀರಿನ ಸೋರಿಕೆಯನ್ನು ತಡೆಗಟ್ಟುವ ಮೂಲಕ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಲಾಯಿತು.

ಇದೇ ವೇಳೆ, ರಾಯಚೂರು ಜಿಲ್ಲೆಯ ನೀರಿನ ಬೇಡಿಕೆಗಳ ಬಗ್ಗೆಯೂ ಸಭೆಯಲ್ಲಿ ಗಮನ ಸೆಳೆಯಲಾಯಿತು. ಮುಂಬರುವ ಬೇಸಿಗೆಯಲ್ಲಿ ರೈತರು ಹಾಗೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಲಭ್ಯವಿರುವ ಜಲಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕುರಿತು ಚರ್ಚಿಸಲಾಯಿತು.

ರೈತರ ಹಿತಾಸಕ್ತಿ ಮತ್ತು ಕುಡಿಯುವ ನೀರಿಗೆ ಆದ್ಯತೆ

ಹಿಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರು ಒದಗಿಸುವುದರ ಜತೆಗೆ ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಲಭ್ಯವಿರುವ ನೀರಿನ ಸಮರ್ಪಕ ಹಂಚಿಕೆ, ಕಾಲುವೆಗಳ ನಿರ್ವಹಣೆ ಹಾಗೂ ವಿವಿಧ ಜಿಲ್ಲೆಗಳ ನೀರಿನ ಬೇಡಿಕೆಗಳಿಗೆ ಅನುಗುಣವಾಗಿ ಸಮನ್ವಯದೊಂದಿಗೆ ಕ್ರಮ ಕೈಗೊಳ್ಳುವ ಅಗತ್ಯವನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಶರಣಬಸಪ್ಪ ದರ್ಶನಪುರ, ಸಂಸದ ಕುಮಾರ್ ನಾಯ್ಕ್, ಶಾಸಕರಾದ ಉಮೇಶ್ ಮೇಟಿ, ಜೆ.ಟಿ. ಪಾಟೀಲ್, ಜಗದೀಶ್ ಗುಡಗುಂಟಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments