Homeಕರ್ನಾಟಕವಿಬಿಜಿ ರಾಮ್ ಜಿಯಡಿ ದಾಖಲೆಯ 2.04 ಕೋಟಿ ಮಾನವ ದಿನ ಸೃಜನೆ: ಈಶ್ವರ ಖಂಡ್ರೆ

ವಿಬಿಜಿ ರಾಮ್ ಜಿಯಡಿ ದಾಖಲೆಯ 2.04 ಕೋಟಿ ಮಾನವ ದಿನ ಸೃಜನೆ: ಈಶ್ವರ ಖಂಡ್ರೆ

ಗ್ರಾಮೀಣ ಉದ್ಯೋಗ ಖಾತ್ರಿ ವಿಬಿಜಿ ರಾಮ್ ಜಿ ಅಡಿಯಲ್ಲಿ ಜುಲೈ 1ರಿಂದ ನಿನ್ನೆಯವರೆಗೆ 2.04 ಕೋಟಿಯಷ್ಟು ಮಾನವ ದಿನ ಉದ್ಯೋಗ ಸೃಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮನ್ರೇಗಾ ಅಡಿಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 1.71 ಕೋಟಿ ಮಾನವ ದಿನ ಸೃಜನೆಯಾಗಿತ್ತು. ಆದರೆ ಈ ಬಾರಿ ಎಲ್ ನಿ ನೋ ಪ್ರಭಾವದಿಂದ ಮಳೆಯ ಕೊರತೆ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಬಡವರಿಗೆ, ದಲಿತರಿಗೆ, ವಂಚಿತ ಅಕುಶಲಿ ಹಾಗೂ ಭೂರಹಿತ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಯಚೂರು ಪ್ರಥಮ

ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಜುಲೈ 1ರಿಂದ ನಿನ್ನೆಯವರೆಗೆ ಒಟ್ಟಾರೆ 24 ಲಕ್ಷ ಮಾನವ ದಿನ ಸೃಜಿಸಲಾಗಿದ್ದು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಬೀದರ್ 21 ಲಕ್ಷ ಮಾನವ ದಿನ, ಕೊಪ್ಪಳ 18 ಲಕ್ಷ ಮಾನವ ದಿನ ಸೃಜಿಸುವುದರೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಉದ್ಯೋಗ ಸೃಜನೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ವಿಜಯನಗರ ಜಿಲ್ಲೆಯಲ್ಲಿ ಶೇ.340ರಷ್ಟು, ಕಲ್ಬುರ್ಗಿ ಜಿಲ್ಲೆಯಲ್ಲಿ ಶೇ.257, ಕೊಪ್ಪಳದಲ್ಲಿ ಶೇ.207, ಬಳ್ಳಾರಿ ಶೇ.175 ಮತ್ತು ಬೀದರ್ ಶೇಕಡ 173ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಜಾಬ್ ಕಾರ್ಡ್ ಮೇಳ-87164 ಹೊಸ ಕಾರ್ಡ್ ವಿತರಣೆ

ರಾಜ್ಯದಲ್ಲಿ ಮನ್ರೇಗಾ ಅಡಿಯಲ್ಲಿ ವಿತರಿಸಲಾಗಿದ್ದ ಜಾಬ್ ಕಾರ್ಡ್ ಗಳ ಇ-ಕೆ.ವೈ.ಸಿ.ಯನ್ನು ಮಾಡುವುದರ ಜೊತೆಗೆ ಜಾಬ್ ಕಾರ್ಡ್ ಮೇಳ ನಡೆಸಿ ಹೊಸ ಜಾಬ್ ಕಾರ್ಡ್ ಗಳನ್ನು ವಿತರಿಸಲು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ, ಗುಳೆ ಹೋಗುತ್ತಿದ್ದ ನೂರಾರು ಕುಟುಂಬಗಳು ಇರುವ ಸ್ಥಳದಲ್ಲಿಯೇ ಉದ್ಯೋಗ ಪಡೆಯಲು ಅನುಕೂಲವಾಗಿದೆ. ಈ ವರ್ಷದಲ್ಲಿ ಹೊಸದಾಗಿ 87164 ಅಧಿಕ ಜಾಬ್ ಕಾರ್ಡ್ ವಿತರಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕೆರೆಯ ಹೂಳೆತ್ತುವುದು, ಸಾಮಾಜಿಕ ಅರಣ್ಯೀಕರಣ, ಕಾಲುವೆ, ಕೆರೆ, ಸರೋವರಗಳ ಪುನಶ್ಚೇತನ, ಜಾನುವಾರು ಶೆಡ್, ಕೃಷಿ ಹೊಂಡ ನಿರ್ಮಾಣ, ಗುಡ್ಡಗಳ ಮಣ್ಣು ಕುಸಿಯದಂತೆ ತಡೆಗಳ ನಿರ್ಮಾಣ, ಗೊಬ್ಬರ ಗುಂಡಿ, ಸಂಪರ್ಕ ರಸ್ತೆ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗ ಹೊಸದಾಗಿ ವಸತಿ ಯೋಜನೆ, ಸಮುದಾಯ ಭವನ, ಗ್ರಾಮೀಣ ಬಸ್ ನಿಲ್ದಾಣಗಳ ನಿರ್ಮಾಣಕ್ಕೂ ಅವಕಾಶ ನೀಡಲಾಗಿದ್ದು ಗ್ರಾಮೀಣ ಭಾಗದಲ್ಲಿ ಶಾಶ್ವತ ಆಸ್ತಿಗಳ ಸೃಜನೆ ಮತ್ತು ಗ್ರಾಮಾಭಿವೃದ್ಧಿಗೂ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಬಿಜಿ ರಾಮ್‌ ಜಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ 125 ದಿನ ಉದ್ಯೋಗ ನೀಡಲು ಅವಕಾಶವಿದ್ದು, ಹೆಣ್ಣು, ಗಂಡು ಎಂಬ ತಾರತಮ್ಯವಿಲ್ಲದೆ 382 ರೂ. ಕೂಲಿ ನೀಡಲಾಗುತ್ತಿದೆ. ಹೀಗಾಗಿ ಪ್ರತಿ ಗ್ರಾಮೀಣ ಕುಟುಂಬಗಳು ವಾರ್ಷಿಕ 47,750 ರೂ. ಗಳಿಸಬಹುದಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments